ಹೊಸದಿಗಂತ ವರದಿ ಬಳ್ಳಾರಿ:
ಕ್ಷೇತ್ರದಲ್ಲಿ ನನ್ನ ವಿರುದ್ಧ ಅಪಸ್ವರ ಎದ್ದಿದೆ ಎನ್ನುವದು ಶುದ್ಧ ಸುಳ್ಳು, ಎಲ್ಲೋ ಇಬ್ಬರೂ ಮಾತ್ರ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಇಡೀ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ಆರ್ಶಿವಾದ ನನ್ನ ಮೇಲಿದೆ. ಈ ಬಾರಿಯೂ ಖಂಡಿತ ಗೆಲುವು ಸಾಧಿಸುವುದಾಗಿ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಈ ರೀತಿ ಅಪಪ್ರಚಾರ, ಸುಳ್ಳು ಹೇಳಿ ಜನರನ್ನ ಹಾದಿತಪ್ಪಿಸುವ ಕೆಲಸ ನಡೆಯುವುದು ಸಾಮಾನ್ಯ. ನಾನು ಇಂತವುಗಳಿಗೆ ಕಿವಿಕೊಡೋಲ್ಲ, ನನ್ನ ಕ್ಷೇತ್ರದ ಜನರೇ ನನ್ನ ಉಸಿರು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ, ಇದನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿರುವೆ. ನಮ್ಮ ಇಬ್ಬರೂ ಮಕ್ಕಳು ಕ್ಷೇತ್ರದ ಜನರ ಸೇವೆ ಮಾಡಲು ಮುಂದಾಗಿದ್ದು, ಸಹಿಸದ ಕೆಲವರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆಟ ನಡೆಯೋಲ್ಲ, ಶಾಸಕ ಸೋಮಲಿಂಗಪ್ಪ ಅವರ ಸ್ವಭಾವ ಎಂತಹದ್ದು ಎನ್ನುವುದು ಜನರಿಗೆ ತಿಳಿದಿದೆ. ಯಾರೇ ಇರಲಿ, ಯಾವುದೇ ಇರಲಿ ತಪ್ಪು ಕಂಡು ಬಂದರೇ ನೇರವಾಗಿಯೇ ಖಂಡಿಸ್ತೇನೆ. ಸರಿ ಇದ್ದರೇ ಯಾವಾಗಲೂ ಅದರ ಪರವಾಗಿ ನಿಲ್ಲುವೆ ಎಂದರು.
ವರಿಷ್ಠರು ಟಿಕೇಟ್ ನೀಡುವ ವಿಶ್ವಾಸವಿದೆ, ಕ್ಷೇತ್ರದ ಜನರ ಆರ್ಶಿವಾದದಿಂದ ಈ ಬಾರಿಯೂ ಗೆಲುವು ಸಾಧಿಸುವ ವಿಶ್ವಾಸವಿದೆ. ಒಂದು ವೇಳೆ ಫಲಿತಾಂಶ ಅದಲು ಬದಲಾದರೇ ರಾಜಕೀಯ ನಿವೃತ್ತಿ ಪಡೆಯುವೆ. ಈಗಾಗಲೇ ಕ್ಷೇತ್ರದ 60ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ಮಾಡಿರುವೆ, ಎಲ್ಲ ಕಡೆಗಳಲ್ಲೂ ಬಿಜೆಪಿಗೆ ಉತ್ತಮ ವಾತಾವರಣವಿದೆ. ನಮ್ಮ ಅಭಿವೃದ್ಧಿ ಸಹಿಸದ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಹೆಚ್ಚು ಮಹತ್ವ ಕೊಡೋಲ್ಲ, ಈ ಬಾರಿಯೂ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.