ಯಾವ ಪಕ್ಷ ಸೇರಬೇಕು ಎನ್ನುವುದು ಜಿಲ್ಲೆಯ ಜನರ ಹೇಳುತ್ತಾರೆ: ಸುಮಲತಾ

ಹೊಸದಿಗಂತ ವರದಿ,ಮದ್ದೂರು:

ಪಕ್ಷ ಸೇರುವ ಸಮಯದಲ್ಲಿ ಯಾವ ಪಕ್ಷವನ್ನು ಸೇರುತ್ತೇನೆ ಎಂದು ನಾನೇ ಹೇಳುತ್ತೇನೆ. ಅದನ್ನು ಬೇರೆಯವರಿಂದ ಏಕೆ ಹೇಳಿಸಲಿ. ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಈಗಲೇ ಯಾವುದಾದರೂ ಪಕ್ಷ ಸೇರಲೇಬೇಕೆಂಬ ತುರ್ತು ಅವಶ್ಯಕತೆ ಏನಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷ ಸೇರಬೇಕು ಎನ್ನುವುದು ನನ್ನೊಬ್ಬಳ ನಿರ್ಧಾರವಲ್ಲ. ಅಂಬರೀಶ್ ಅಭಿಮಾನಿಗಳು, ಕಾರ್ಯಕರ್ತರು, ಜಿಲ್ಲೆಯ ಜನರ ಆಶಯದಂತೆ ತೀರ್ಮಾನ ಕೈಗೊಳ್ಳುತ್ತೇನೆ. ಜನರಿಂದ ನಾನೂ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ನಿಮಗೆ ಗೌರವ-ಮರ್ಯಾದೆ ಸಿಗುವ ಪಕ್ಷವನ್ನು ಸೇರುವಂತೆ ಹೇಳುತ್ತಿದ್ದಾರೆ. ಸಮಯ ಬಂದಾಗ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದು ತಿಳಿಸಿದರು.
ಯಾವ ಪಕ್ಷದ ಕದ ತಟ್ಟಿಲ್ಲ :
ನಾನು ಇದುವರೆಗೂ ನನಗೆ ಅಥವಾ ನನ್ನ ಮಗನಿಗೆ ಟಿಕೆಟ್ ಕೊಡುವಂತೆ ಯಾವುದೇ ಪಕ್ಷದ ಬಾಗಿಲು ತಟ್ಟಿಲ್ಲ. ಪಕ್ಷ ಸೇರ್ಪಡೆ ವಿಚಾರವಾಗಿಯೂ ಯಾವುದೇ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿಲ್ಲ. ಊಹಾಪೋಹಗಳಿಗೆಲ್ಲಾ ನಾನು ಉತ್ತರ ಕೊಡುವುದಿಲ್ಲ. ಜಿಲ್ಲೆಯ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿಯಾಗುವುದು ಸಹಜ. ಅದಕ್ಕೆಲ್ಲಾ ಪಕ್ಷ ಸೇರ್ಪಡೆ ಉದ್ದೇಶದಿಂದಲೇ ಭೇಟಿಯಾಗಿದ್ದಾರೆಂದು ಬಣ್ಣ ಕಟ್ಟಿದರೆ ನಾನು ಹೊಣೆಯಲ್ಲ ಎಂದು ನೇರವಾಗಿ ಹೇಳಿದರು.
ವದಂತಿ, ಗಾಸಿಪ್‌ಗಳಿಗೆ ಉತ್ತರಿಸೋಲ್ಲ :
ನನ್ನ ಪಕ್ಷ ಸೇರ್ಪಡೆ ವಿಚಾರವಾಗಿ ಜನರು ತಲೆಕೆಡಿಸಿಕೊಂಡಿಲ್ಲ. ನಾನೂ ಆ ಕುರಿತು ಇನ್ನೂ ನಿರ್ಧಾರ ಮಾಡಿಲ್ಲ. ಸುಮಲತಾ ಈ ಪಕ್ಷ ಸೇರುತ್ತಾರೆ, ಆ ಪಕ್ಷ ಸೇರುತ್ತಾರೆ ಅಂತ ವದಂತಿಗಳು, ಗಾಸಿಪ್ ಹರಿದಾಡುತ್ತಿವೆ. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಪಕ್ಷ ಸೇರ್ಪಡೆ ಬಗ್ಗೆ ಜನರಿಗೆ ಸ್ಪಷ್ಟತೆ ನೀಡಬೇಕೋ ಅವಾಗ ಹೇಳುತ್ತೇನೆ ಎಂದರು.
ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಮಂಡ್ಯದಲ್ಲಿ ಸಮಾವೇಶ ನಡೆಸುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಸಮಾವೇಶಕ್ಕೆ ಬರುವಂತೆ ಯಾರೂ ನನಗೆ ಆಹ್ವಾನ ನೀಡಿಲ್ಲ. ಇಂತಹದ್ದೇ ಪಕ್ಷ ಸೇರುವಂತೆ ಯಾರೂ ನನ್ನ ಜೊತೆಗೆ ಮಾತನಾಡಿಲ್ಲ ಎಂದು ವಿವರಿಸಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!