ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ,ಉಡುಪಿ:
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೈದರಾಬಾದ್ಗೆ ಹಾರಬೇಕಿದ್ದ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿದ್ದ ವಿಮಾನವು ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಟೇಕಾಫ್ ಆಗುವ ಮುನ್ನ ಪಾರ್ಕಿಂಗ್ ಬೇಗೆ ಮರಳಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಏರ್ ಇಂಡಿಯಾ 9 ಐ 517 ವಿಮಾನವು ಬೆಂಗಳೂರಿನಿಂದ ಭಾನುವಾರ ಸಂಜೆ 6.45ಕ್ಕೆ ಹೊರಡಬೇಕಿತ್ತು ಮತ್ತು ರಾತ್ರಿ 8.15 ಕ್ಕೆ ಹೈದರಾಬಾದ್ ತಲುಪಲು ನಿಗದಿಯಾಗಿತ್ತು. ಆದರೆ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಟೇಕ್ ಆಫ್ ಆಗಿಲ್ಲ.
ಬೋರ್ಡ್ನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇದ್ದುದರಿಂದ ತಕ್ಷಣ ಅವರ ಬಳಿ ತಲುಪಿದ ವಿಮಾನಯಾನ ಅಧಿಕಾರಿಗಳು, ತಾಂತ್ರಿಕ ಕಾರಣಗಳಿಂದ ವಿಮಾನ ನಿಲ್ಲಿಸಲಾಗಿದೆ. ಸದ್ಯ ವಿಮಾನದಿಂದ ಕೆಳಗಿಳಿದು ಮುಂದಿನ ವ್ಯವಸ್ಥೆಗಳನ್ನು ಮಾಡುವವರೆಗೆ ವಿಐಪಿ ಲಾಂಜ್ನಲ್ಲಿ ಕಾಯುವಂತೆ ವಿನಂತಿಸಿದ್ದಾರೆ. ಆದರೆ ಕೇಂದ್ರ ಸಚಿವರು ಗಗನ ಸಖಿಯರು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿ, ವಿಮಾನದಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಅಗತ್ಯ ಏರ್ಪಾಡುಗಳನ್ನು ಮಾಡುವಂತೆ ಭಿನ್ನವಿಸಿದ್ದಾರೆ. ಅಲ್ಲದೇ ತಾವು ಬೋರ್ಡ್ನಿಂದ ಇಳಿಯುವ ಕೊನೆಯ ವ್ಯಕ್ತಿ ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೊಬ್ಬ ವಿಐಪಿಯಾಗಿದ್ದರೂ ಅವರ ಈ ನಡೆಯಿಂದ, ಸಚಿವರ ವಿನಮ್ರತೆಯ ಇನ್ನೊಂದು ಮುಖ ಪ್ರದರ್ಶನಗೊಂಡಿದೆ. ಅಲ್ಲದೇ ಇದು ವಿಮಾನದಲ್ಲಿದ್ದ ಎಲ್ಲರಿಗೂ ಸಮಾನವಾದ ಗೌರವವನ್ನು ಖಾತ್ರಿಪಡಿಸಿದೆ. ನಂತರ ಏರ್ ಇಂಡಿಯಾ ಏರ್ಲೈನ್ಸ್ ಹೈದರಾಬಾದ್ಗೆ ಹೋಗುವ ಎಲ್ಲ ಪ್ರಯಾಣಿಕರಿಗೆ ಬದಲಿ ವಿಮಾನ ವ್ಯವಸ್ಥೆ ಮಾಡಿದೆ.