ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ದಲಿತ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಇಂದು ನಿಧನರಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯ ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಅವರ ನಿಧನ ಈ ನಾಡಿಗೆ ಬಹುದೊಡ್ಡ ಆಘಾತ. ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ ಧೀಮಂತ ನಾಯಕರಾಗಿದ್ದರು, ಮೃತರಿಗೆ ಚಿರಶಾಂತಿ ಸಿಗಲಿ ಎಂದು ಕೆಎಸ್ ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.
ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಚಿವ ಸಿ.ಪಿ. ಯೋಗೇಶ್ವರ ಸಂತಾಪ, ಡಿ.ಕೆ. ಶಿವಕುಮಾರ್ , ಸಿದ್ದರಾಮಯ್ಯ ಸಹಿತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿದ್ದಲಿಂಗಯ್ಯ ಅವರಿಗೆ ಕಳೆದ ತಿಂಗಳು ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು, ಮೇ 2ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಲ್ಲಿನ ರಂಗದೊರೈ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನುಮೇ 5ರಂದು ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.