ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಒಂಟಿ ಮಹಿಳೆಯೊಬ್ಬರನ್ನು ಹಿಂಬಾಲಿಸಿ ತಡೆದು ಆಕೆಯ ಮೇಲೆ ಹಲ್ಲೆ ಮಾಡಿ, ಮಾನಭಂಗಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳಿಗೆ ಕೊಪ್ಪ ಜೆಎಂಎಫ್ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಶೃಂಗೇರಿ ತಾಲ್ಲೂಕಿನ ಸಿ.ಸಂತೋಷ್ ಹಾಗೂ ಪ್ರದೀಪ್ ಎಂಬಿಬ್ಬರು ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ. 2015 ಡಿಸೆಂಬರ್ 17 ರಂದು ಮಹಿಳೆಯೊಬ್ಬರು ಜಯಪುರದ ಭಲೇಗೋಡು ಬಸ್ ನಿಲ್ದಾಣದಿಂದ ಕಾಡಿನ ರಸ್ತೆಯಲ್ಲಿ ತಮ್ಮ ಮನೆ ಕಡೆಗೆ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಅವರನ್ನು ಹಿಂಬಾಲಿಸಿದ ಆರೋಪಿಗಳು ತಡೆದು ನಿಲ್ಲಿಸಿ, ಆಕೆಯ ಬಾಯಿ, ಮುಖ ಹಾಗೂ ಕುತ್ತಿಗೆಯನ್ನು ಹಿಸುಕಿ, ತಲೆಯನ್ನು ನೆಲಕ್ಕೆ ಜಜ್ಜಿ ಗಾಯವನ್ನು ಮಾಡಿದ್ದರು. ತಪ್ಪಿಸಿಕೊಂಡ ಮಹಿಳೆಯು ಜೋರಾಗಿ ಕಿರುಚುತ್ತಾ ಓಡುತ್ತಿದ್ದಾಗ ಶಬ್ದ ಕೇಳಿ ಮಹಿಳೆಯ ತಂದೆ ಬಂದಿರುವುದನ್ನು ಗಮನಿಸಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ.ಗೌತಮ್ ಅವರು ಆರೋಪಿತರನ್ನು ದೋಷಿ ಎಂದು ತೀರ್ಪು ನೀಡಿ, ಕಲಂ 354 ಅಪರಾಧಕ್ಕೆ ತಲಾ 3 ವರ್ಷ ಕಠಿಣ ಜೈಲು ಶಿಕ್ಷೆ, ಮತ್ತು ತಲಾ 5,000 ರೂ. ಕಲಂ 354(ಎ) ಅಪರಾಧಕ್ಕೆ ತಲಾ 2 ವರ್ಷ ಜೈಲು ಶಿಕ್ಷೆ, ಕಲಂ 323ರ ಅಪರಾಧಕ್ಕೆ 8 ತಿಂಗಳು ಜೈಲು ಕಲಂ 341ರ ಅಪರಾಧಕ್ಕೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕು.ಶಾಂಭವಿ ವಾದ ಮಂಡಿಸಿದ್ದರು.