ಮುಸ್ಲಿಂ ಗೂಂಡಾಗಳ ಮನಸ್ಥಿತಿ ಬದಲಾಗದಿರುವುದೇ ಹತ್ಯೆಗೆ ಕಾರಣ : ಕೆ.ಎಸ್.ಈಶ್ವರಪ್ಪ

ಹೊಸದಿಗಂತ ವರದಿ, ಚಿತ್ರದುರ್ಗ:

ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಕೆಲವು ಮುಸಲ್ಮಾನ್ ಗೂಂಡಾಗಳ ಮನಸ್ಥಿತಿ ಇನ್ನು ಬದಲಾವಣೆಯಾಗದಿರುವುದೇ ಕಾರಣ. ಶಾಂತಿಗೆ ಹೆಸರಾಗಿರುವ ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ಕಗ್ಗೊಲೆಯಾಗುತ್ತಿರುವುದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಮನದಲ್ಲಿರುವ ನೋವನ್ನು ಹೊರ ಹಾಕಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾಯಿತು. ಈಗ ಕರಾವಳಿಯಲ್ಲಿ ಮತ್ತೊಂದು ಹತ್ಯೆಯಾಗಿದೆ. ಹೇಡಿಗಳ ದುಷ್ಕೃತ್ಯ ಇದು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್‌ರನ್ನು ಭೇಟಿಯಾಗಿದ್ದೇನೆ. ಕೊಲೆಗೆ ಕೊಲೆಯೇ ಉತ್ತರವಲ್ಲ. ಹಿಂದೂ ಸಮಾಜದ ಶಕ್ತಿಯನ್ನು ದುರಪಯೋಗಪಡಿಸಿಕೊಂಡು ಕೆಲವು ಮುಸ್ಲಿಂ ಗೂಂಡಾಗಳು ನಿರಪರಾಧಿ ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ದೂರಿದರು.

ಮುಂದೆ ಇಂತಹ ಘಟನೆಗಳು ಮನರುಕಳಿಸದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ಷಾ, ರಾಜ್ಯದ ಮುಖ್ಯಮಂತ್ರಿ ಅವರಲ್ಲಿ ಪ್ರಾರ್ಥಿಸುತ್ತೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿಲ್ಲ. ಆಗಿರುವ ಕೊಲೆಗೆ ಯಾರು ಕಾರಣ ಎನ್ನುವುದನ್ನು ಪತ್ತೆಹಚ್ಚಿ ದುಃಖತಪ್ತ ಪ್ರವೀಣ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಕೊಲೆಯ ಹಿಂದೆ ರಾಷ್ಟ್ರದ್ರೋಹದ ಸಂಘಟನೆಗಳಿದೆಯೇ? ಪ್ರವೀಣ್ ನೆಟ್ಟಾರು ಕೊಲೆ ಆಗಿದ್ದಕ್ಕೆ ಕೆಲವರು ಆಕ್ರೋಶದಿಂದ ರಾಜಿನಾಮೆ ನೀಡುತ್ತಿರುವುದರಲ್ಲಿ ಅರ್ಥವಿಲ್ಲ. ಸಿಟ್ಟನ್ನು ಪಕ್ಷದ ಮೇಲೆ ತೋರಿಸಬಾರದು ಎಂದು ಹೇಳಿದರು.

ಲಕ್ಷಾಂತರ ಕಾರ್ಯಕರ್ತರು ಹಿರಿಯರು ಸೇರಿ ಪಕ್ಷ ಕಟ್ಟಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆಗೆ ಪರಿಹಾರ ಏನು ಎನ್ನುವುದನ್ನು ಹಿರಿಯರು ಚಿಂತಸುತ್ತಿದ್ದಾರೆ. ಕೆಲವು ಮುಸಲ್ಮಾನ್ ಕೊಲೆಗಡುಕರ ಮನಸ್ಥಿತಿ ಬದಲಾಗುವುದು ಕಷ್ಟ. ಕಾನೂನು ಸುವ್ಯವಸ್ಥೆ ವಿಫಲವಾಗಿದೆ. ಇನ್ನು ಮುಂದೆ ಹಿಂದೂ ಕಾರ್ಯಕರ್ತನ ಹತ್ಯೆಯಾದರೆ ನೀವುಗಳು ಉಳಿಯುವುದಿಲ್ಲ ಎನ್ನುವ ಬೆದರಿಕೆ ಮುಸಲ್ಮಾನರಲ್ಲಿ ಹುಟ್ಟುಬೇಕು. ಇಲ್ಲವೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತೆ ದಿಟ್ಟಿ ನಿಲುವು ತೆಗೆದುಕೊಳ್ಳಬೇಕು. ಹಾಗಾಗದಿದ್ದರೆ ಹಿಂದೂಗಳ ಹತ್ಯೆ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸಲ್ಮಾನ್ ಗೂಂಡಾಗಳೇ ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆಗೈದಿರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇವರುಗಳು ಏಕೆ ನೇರವಾಗಿ ಹೇಳುತ್ತಿಲ್ಲ. ಧ್ವಂಧ್ವ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೊಲೆಗಡುಕರ ಪರವಾಗಿ ನಿಲ್ಲುತ್ತಿತ್ತು. ಹಿಂದುತ್ವವನ್ನು ಧಮನ ಮಾಡುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಆರೋಪಿಸಿದರು.

ಕೊಲೆ ಮಾಡಿದವರ ವಿರುದ್ದ ಕಾಂಗ್ರೆಸ್‌ನವರ ಆಕ್ರೋಶವಿರಬೇಕೆ ವಿನಃ ನಮ್ಮ ಪಕ್ಷದ ಮೇಲಲ್ಲ. ಬೆಳಗಾವಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಾನು ನಿರಪರಾಧಿಯಾಗಿ ಆರೋಪದಿಂದ ಹೊರ ಬಂದಿರುವುದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ. ಅನುಮಾನವಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಿ ಎಂದು ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ಡಿ.ಕೆ.ಶಿವಕುಮಾರ್ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಮತ್ತೆ ಯಾವಾಗ ಹೋಗುತ್ತಾರೋ ಗೊತ್ತಿಲ್ಲ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಒಂದು ವರ್ಷದ ಅಧಿಕಾರವಧಿ ಪೂರೈಸಿರುವುದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಎಂದು ಹೇಳುವ ನೈತಿಕತೆ ಸಿದ್ದರಾಮಯ್ಯ, ಡಿ.ಕೆ.ಶಿ.ಗೆ ಇಲ್ಲ. ಜಮೀರ್ ಅಹಮದ್‌ಖಾನ್‌ನಂಥ ಬ್ರೋಕರ್‌ನನ್ನು ಕಾಂಗ್ರೆಸ್‌ನವರು ಬಳಸಿಕೊಳ್ಳುತ್ತಿದ್ದಾರೆಎಂದು ಆರೋಪಿಸಿದರು.

ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇವರ ಮೈಯಲ್ಲಿ ಹರಿಯುತ್ತಿರುವುದು ಯಾವ ರಕ್ತ ಎನ್ನುವುದನ್ನು ಮರೆತಿದ್ದಾರೆ. ಜಾತಿವಾದಿಗಳಿಗೆ ಜನ ಅಧಿಕಾರ ಕೊಡುವುದಿಲ್ಲ. ಜೆಡಿಎಸ್, ಕಾಂಗ್ರೆಸ್‌ನವರದು ಕುಟುಂಬ ರಾಜಕಾರಣ. ನಮ್ಮದು ಆಗಲ್ಲ. ಒಂದು ಕುಟುಂಬಕ್ಕೆ ಒಂದು ಸ್ಥಾನ ಎಂದು ಈಗಾಗಲೆ ಪಕ್ಷದ ಹಿರಿಯರು ಹೇಳಿದ್ದಾರೆ. ವರಿಷ್ಟರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವುಗಳು ಬದ್ದರಾಗಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಸಿದ್ದೇಶ್ ಯಾದವ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲಾ ಕಾರ್ಯಕಾರಿಣಿ ವಿಶೇಷ ಆಹ್ವಾನಿತ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಸಂಪತ್ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!