ಶೀಘ್ರದಲ್ಲೇ ಪರಿಷ್ಕೃತ ಪಠ್ಯಪುಸ್ತಕ ಪೂರೈಕೆಯಾಗಲಿದೆ :ಶಿಕ್ಷಣ ಸಚಿವ ನಾಗೇಶ್

ಹೊಸದಿಗಂತ ವರದಿ ಧಾರವಾಡ:

ಪಠ್ಯಪುಸ್ತಕದಲ್ಲಿರುವ ತಪ್ಪುಗಳನ್ನು ಒಪ್ಪಿಕೊಳ್ಳುತ್ತೇವೆ ಅದರಲ್ಲಿರುವ ಲೋಪದೋಷ ಸರಿಪಡಿಸಿ, ಶೀಘ್ರದಲ್ಲೇ ಪರಿಷ್ಕೃತ ಪಠ್ಯಪುಸ್ತಕ ಪೂರೈಕೆ ಮಾಡುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ ದೊಡ್ಡ ತಪ್ಪು ಮಾಡಬಾರದು. ಇಂಥದ್ದೊಂದು ಜವಾಬ್ದಾರಿ ಸಿಕ್ಕಾಗ ಅತ್ಯಂತ ಜಾಗರೂಕರಾಗಿ ಕೆಲಸ ಮಾಡಬೇಕು. ಈಗಾಗಲೇ ಆಗಿರುವ ತಪ್ಪನ್ನು ಗಮನಿಸಿ ಅದರ ಮರು ಪರಿಷ್ಕರಣೆಗೆ ನಾವು ಮುಂದಾಗಿದ್ದೇವೆ.

ಬಸವಣ್ಣನ ಪಠ್ಯದಲ್ಲಿ ಹಲವಾರು ಹೊಸ ವಿಚಾರಗಳನ್ನು ಸೇರಿಸಲಾಗಿದೆ. ಈ ರೀತಿಯ ಲೋಪಗಳನ್ನು ಕಂಡು ಹಿಡಿದು ನಮ್ಮ ಗಮನಕ್ಕೆ ತಂದರೆ ನಾವು ಕೂಡಲೇ ಅದನ್ನು ಸರಿಪಡಿಸುತ್ತೇವೆ. ಸದ್ಯ ನಡೆಯುತ್ತಿರುವ ವಾದ-ವಿವಾದಗಳು ಮಕ್ಕಳ ಮೇಲೆ ಪರಿಣಾಮ ಬೀರುವುದು ಬೇಡ. ಹೀಗಾಗಿ ಪಠ್ಯದಲ್ಲಾದ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಪಠ್ಯದಲ್ಲಿ ಯಾವುದೇ ಸಾಹಿತಿಗಳನ್ನು ನಾವು ಕಡೆಗಣಿಸಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮಹರಾಜರ ಕಥೆಗಳನ್ನು ತೆಗೆದು ಟಿಪ್ಪು ಸುಲ್ತಾನ್ ಕಥೆ ಹಾಕಲಾಗಿತ್ತು. ಸಿಂಧೂ ಸಂಸ್ಕೃತಿ ಕಿತ್ತು ಹಾಕಿ ನೆಹರೂ ಪಾಠ ಹಾಕಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತರನ್ನು ಮಾತ್ರ ಪುಸ್ತಕದಲ್ಲಿ ತರಲಾಗಿತ್ತು. ಇಂತಹ ನೂರು ಉದಾಹರಣೆಗಳಿವೆ. ದೇವನೂರು ಮಹಾದೇವನವರು ಪಠ್ಯದಲ್ಲಿ ತಪ್ಪುಗಳಾಗಿದ್ದನ್ನು ಮೊದಲೇ ನಮಗೆ ಹೇಳಬಹುದಿತ್ತು. ಆದರೆ, ಪುಸ್ತಕ ಬಿಡುಗಡೆಯಾದ ಮೇಲೆ ಹೇಳಿದ್ದು ನೋವಾಗಿದೆ. ಬರಗೂರು ರಾಮಚಂದ್ರಪ್ಪನವರ ಕಾಲದಲ್ಲೂ ಪಠ್ಯದಲ್ಲಿ ತಪ್ಪುಗಳಾಗಿದ್ದವು. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಾಡಗೀತೆಗೆ ಅವಮಾನ ಮಾಡಲಾಗಿತ್ತು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!