Monday, August 15, 2022

Latest Posts

ಭೂಕಂಪದ ಬೆನ್ನಲ್ಲೇ ಮನೆ ಮೇಲೆ ಉರುಳಿ ಬಂದ ಬಂಡೆ.. ಅದೃಷ್ಟವಶಾತ್ ಪಾರಾದ ಕುಟುಂಬ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗಿನ ವಿವಿಧೆಡೆ ಸಂಭವಿಸುತ್ತಿರುವ ಭೂಕಂಪನದ ಆತಂಕದ ನಡುವೆಯೇ ಕರಿಕೆ ಗ್ರಾ.ಪಂ ವ್ಯಾಪ್ತಿಯ ಕುಂಡತ್ತಿಕಾನ ಗ್ರಾಮದಲ್ಲಿ ಬಂಡೆಯೊಂದು ಮನೆಯ ಮೇಲೆ ಉರುಳಿ ಬಂದ ಘಟನೆ ನಡೆದಿದೆ. ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಜೂ.26ರ ಮಧ್ಯರಾತ್ರಿ ಜೋರಾಗಿ ಮಳೆ ಸುರಿದ ಪರಿಣಾಮ ಉರುಳಿಬಂದ ಬಂಡೆ ಕಲ್ಲೊಂದು ವಾರ್ಡ್ ಸಂಖ್ಯೆ 3 ರ ನಿವಾಸಿ ಜಾನಕಿ ಎಂಬವರ ಶೀಟ್ ಮನೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಮನೆಯ ಮೇಲ್ಛಾವಣಿ ಮತ್ತು ಅಡುಗೆ ಕೋಣೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಬಂಡೆಕಲ್ಲು ಅಡುಗೆ ಮನೆಗೆ ಬಿದ್ದ ಪರಿಣಾಮ ವಸ್ತುಗಳೆಲ್ಲವೂ ನಾಶವಾಗಿದೆ. ಅದೃಷ್ಟವಶಾತ್ ಪಕ್ಕದ ಕೋಣೆಯಲ್ಲೇ ನಿದ್ರಿಸುತ್ತಿದ್ದ ಜಾನಕಿ ಹಾಗೂ ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಧ್ಯರಾತ್ರಿ ಕೇಳಿ ಬಂದ ದೊಡ್ಡ ಶಬ್ಧದಿಂದ ಗಾಬರಿಯಾಗಿ ಎಚ್ಚರಗೊಂಡಾಗ ಬಂಡೆಕಲ್ಲು ಅಡುಗೆ ಕೋಣೆಯೊಳಗೆ ಬಿದ್ದಿತ್ತು. ನಂತರ ನಾವು ಮತ್ತಷ್ಟು ಅನಾಹುತ ಸಂಭವಿಸಬಹುದೆಂದು ಭಯಗೊಂಡು ಪಕ್ಕದ ಮನೆಯಲ್ಲಿ ಆಶ್ರಯ ಪಡೆದೆವು ಎಂದು ಜಾನಕಿ ಹೇಳಿದರು.
ಹಿಂದಿನ ದಿನ ಭೂಮಿ ಕಂಪಿಸಿತ್ತು:
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಜೂ.25 ರಂದು ಬೆಳಗ್ಗೆ ಭೂಮಿ ಕಂಪಿಸಿತ್ತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3 ರಷ್ಟಿತ್ತು. ಕೊಡಗಿನ ಗಡಿ ಭಾಗವಾದ ಕರಿಕೆ, ಸಂಪಾಜೆ, ಚೆಂಬು ವಿಭಾಗದಲ್ಲಿ ಬೆಳಗ್ಗೆ 9 ಮತ್ತು 9.10 ಗಂಟೆಯ ನಡುವೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿತ್ತು. ಕೆಲವು ಮನೆಗಳಲ್ಲಿ ಪಾತ್ರೆಗಳು ಅಲುಗಾಡಿದ ಅನುಭವವಾಗಿದ್ದರೆ, ಮತ್ತೆ ಕೆಲವು ಕಡೆ ಭೂಮಿಯೊಳಗೆ ದೊಡ್ಡ ಪ್ರಮಾಣದ ಶಬ್ಧವಾಗಿದೆ.
ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಿಂದ ವಾಯುವ್ಯ ದಿಕ್ಕಿನಲ್ಲಿ 4.7 ಕಿಮೀ ದೂರದ ಪ್ರದೇಶದ ಭೂಮಿಯ 10 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿತ್ತು.
ಈ ಭೂಕಂಪನದ ಪರಿಣಾಮದಿಂದ ಬಂಡೆ ಉರುಳಿರಬಹುದೆಂದು ಕರಿಕೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ ನಂತರವಷ್ಟೇ ಸತ್ಯಾಂಶ ಹೊರ ಬೀಳಲಿದೆ.
ಇನ್ನೂ ಎರಡು ಬಂಡೆಗಳಿವೆ:
ಪಕ್ಕದಲ್ಲೇ ಇರುವ ಬೆಟ್ಟದಿಂದ ಬಂಡೆ ಉರುಳಿದ್ದು, ಇನ್ನೂ ಎರಡು ಬಂಡೆಗಳು ಬೀಳುವ ಹಂತದಲ್ಲಿವೆ. ಈ ಭಾಗದಲ್ಲಿ ಹತ್ತಾರು ಮನೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ವಾರ್ಡ್ ಸಂಖ್ಯೆ 3 ರ ಗ್ರಾ.ಪಂ ಸದಸ್ಯೆ ಜಯಶ್ರೀ ಸ್ಥಳ ಪರಿಶೀಲನೆ ನಡೆಸಿದ್ದು, ಹಿರಿಯ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆತಂಕ ದೂರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss