ದೇಹಗಾಯಗೊಂಡರೂ ಶತ್ರುವನ್ನು ಸದೆಬಡಿದ ʼಪರಮ ವೀರʼನ ಸಾಹಸಗಾಥೆ

-ಗಣೇಶ ಭಟ್‌, ಗೋಪಿನಮರಿ

ಕಾಶ್ಮೀರದ ಮೇಲೆ‌ ದಾಳಿ ಮಾಡಿದ್ದ ಶತ್ರು ಸೈನ್ಯವು ತಿಥ್ವಾಲ್ ಪ್ರದೇಶವನ್ನು ಆಕ್ರಮಿಸಿಕೊಂಡು ಕೂತಿತ್ತು. ಶತ್ರುವನ್ನು ಹಿಮ್ಮೆಟ್ಟಿಸಲು ಭಾರತೀಯ ಸೇನೆ ಆಕ್ರಮಣ ಮಾಡಿ ಮುಂದುವರೆಯಿತು. ಆದರೆ ಶತ್ರು ಸೈನಿಕರ ಸಂಖ್ಯೆ ಹೆಚ್ಚಿತ್ತು. ಅವರೆಲ್ಲ ಮುನ್ನುಗ್ಗಿ ಬರುತ್ತಿದ್ದ ಭಾರತೀಯ ಸೈನ್ಯದ ಮೇಲೆ ಒಂದೇ ಸಮನೆ ಗುಂಡು ಹಾರಿಸುತ್ತ ಬಾಂಬ್ ದಾಳಿ ನಡೆಸುತ್ತಿದ್ದರು. ಆಕ್ರಮಣದ ವೇಳೆ ಶತ್ರುವಿನ ಮೇಲೆ ದಾಳಿ ಮಾಡಿ ಹೊರಟಿದ್ದ ತುಕಡಿಯಲ್ಲಿದ್ದ ಬಹುತೇಕರು ಸಾವನ್ನಪ್ಪಿದ್ದರು. ಆದರೂ ಒಬ್ಬ ಧೀರ ಸೈನಿಕ ಮಾತ್ರ ಶತ್ರುವಿನ ಬಾಂಬ್ ದಾಳಿಗಳಿಗೂ ಹೆದರದೇ ಮುಂದೆ ಹೆಜ್ಜೆಯಿಡುತ್ತಿದ್ದ. ಆಗಲೇ ಸಿಡಿದ ಬಾಂಬ್ ಒಂದರಿಂದ ಆತನ ಅರ್ಧ ಮುಖ ಸುಟ್ಟು ಹೋಗಿ ಅದರಿಂದ ರಕ್ತ ಬಸಿಯುತ್ತಿತ್ತು. ಆದರೂ ಕೊನೆಯ ಉಸಿರು‌ ದೇಹದಿಂದ ಹೊರಹೋಗುವುದರೊಳಗೆ ಶತ್ರುವಿನ ಮೇಲೆ ಸೈತಾನನಂತೆ ಮುಗಿಬಿದ್ದು ಆಘಾತ ನೀಡಿ ಶತ್ರುವನ್ನು ಬಗ್ಗು ಬಡಿದ ಈ ಧೀರ ಹೆಸರೇ ‘ಹವಾಲ್ದಾರ್. ಪೀರು ಸಿಂಗ್’

ಹುಟ್ಟಿದ್ದು 1918 ರ ಮೇ 20 ರಂದು ರಾಜಸ್ಥಾನ ಝಜ್ನೂ ಜಿಲ್ಲೆಯಲ್ಲಿ. ಈತನ ತಂದೆ, ತಾತ ಎಲ್ಲರೂ ಮಿಲಿಟರಿಯಲ್ಲಿ ಕೆಲಸ ಮಾಡಿದ್ದರು. ಹಾಗಾಗಿ ಬಾಲ್ಯದಿಂದಲೇ ಮಿಲಿಟರಿ ಸೇರುವ ಹುಚ್ಚು ಪೀರು ಸಿಂಗನಿಗೆ ಇತ್ತು. ಸೇನೆಗೆ ಸೇರಲು ಹೊರಟಾಗ ಎರಡು ಬಾರಿ ಆತನ ವಯಸ್ಸು‌ ಕಡಿಮೆ ಎಂಬ ಕಾರಣಕ್ಕೆ ವಾಪಸ್ಸು ಕಳಿಸಿದ್ದರು‌. ಅಂತೂ 1936 ರ ಮೇ 20 ರಂದು ಆತ ಬ್ರಿಟೀಷ್ ಭಾರತೀಯ ಸೇನೆಗೆ ಸೇರಿದ್ದ. ಆಗಿನ್ನೂ ಆತನ ವಯಸ್ಸು 19 ಮಾತ್ರ. ಮೊದಲು ರಾಜಪುತಾನ ರೈಫ಼ಲ್ಸ್ ನಲ್ಲಿದ್ದ ಈತನ ಧೈರ್ಯ‌ ನೋಡಿ ನಂತರ ಈತನನ್ನು ಪಂಜಾಬ್ ರೆಜಿಮೆಂಟಿಗೆ ವರ್ಗಾವಣೆ ಮಾಡಲಾಗಿತ್ತು. ಎರಡನೇ ವಿಶ್ವ ಯುದ್ಧದಲ್ಲಿ ಭಾಗವಹಿಸಿದ ನಂತರ ಪೀರು ಸಿಂಗ್ ಭಾರತ ಸ್ವತಂತ್ರಗೊಂಡ ನಂತರ ಭಾರತೀಯ ಸೇನೆಯ ಭಾಗವಾಗಿ ತಮ್ಮ ಸೇವೆ ಮುಂದುವರೆಸಿದರು.

1947ರ ಅಕ್ಟೋಬರ್ ನಲ್ಲಿ ವಿಭಜನೆಗೊಂಡ ಪಾಕಿಸ್ತಾನಿಯರು ಕಾಶ್ಮೀರವನ್ನು ಕಬಳಿಸುವ ಉದ್ದೇಶದಿಂದ ದಾಳಿ ನಡೆಸಿದರು.ಆ ಸಂದರ್ಭದಲ್ಲಿ ಶತ್ರುವನ್ನು ಹಿಮ್ಮೆಟ್ಟಿಸುವ ಯುದ್ದವಾಹಿನಿಯ ಪದಾತಿ ಸೈನ್ಯದ ಭಾಗವಾಗಿದ್ದ ಪೀರು ಸಿಂಗನ ರಜಪುತಾನ ರೈಫ಼ಲ್ಸ್ ಶತ್ರುವಿನ‌ ಮೇಲೆ ಆಕ್ರಮಣ ಮಾಡುವ ಜವಾಬ್ದಾರಿ ಹೊತ್ತಿತ್ತು. ತಿಥ್ವಾಲ್ ನ‌ ಎತ್ತರದ ಪ್ರದೇಶದಲ್ಲಿ ಹಳ್ಳ ತೋಡಿಕೊಂಡು ಅದರಲ್ಲಿ ಭದ್ರವಾಗಿ ಶತ್ರು ಸೈನಿಕರು ನೆಲೆಯೂರಿ ಕೂತಿದ್ದರು. ಅವರನ್ನು ತಗ್ಗಿನ ಪ್ರದೇಶದಿಂದ ಮುನ್ನುಗ್ಗುತ್ತ ಹಿಮ್ಮೆಟ್ಟಿಸಿ‌ ಜಾಗದ ಮೇಲೆ‌ ನಿಯಂತ್ರಣ ಸಾಧಿಸಬೇಕಿತ್ತು. ಶತ್ರುವು ಎತ್ತರದ ಪ್ರದೇಶದಲ್ಲಿದ್ದಾಗ ತಗ್ಗಿನ‌ ಪ್ರದೇಶದಿಂದ ಆಕ್ರಮಣ ಮಾಡುವುದೆಂದರೆ ಸುಲಭದ ಮಾತಲ್ಲ. ಯಾಕೆಂದರೆ ಕೆಳಗಿನಿಂದ ಶತ್ರುವಿನ ನಿಖರವಾದ ಚಲನವಲನಗಳು‌ ಗೋಚರವಾಗುವುದಿಲ್ಲ. ಆದರೆ ಶತ್ರುವಿಗೆ ನಮ್ಮೆಲ್ಲ ಚಲನವಲನಗಳು‌ ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತವೆ. ಆತ ನಮ್ಮೆಲ್ಲರ ಮೇಲೆ ಹದ್ದಿನಕಣ್ಣಿಟ್ಟು ನಿಖರವಾಗಿ ದಾಳಿ ಮಾಡಬಲ್ಲವನಾಗಿರುತ್ತಾನೆ.

ಆದರೆ ಹವಾಲ್ದಾರ್ ಪೀರು ಸಿಂಗ್ ನಲ್ಲಿದ್ದ ಛಾತಿ ಎಂಥದ್ದೆಂದರೆ ಶತ್ರುವು ಎಂಎಂಜಿ ಮಿಷನ್‌ಗನ್ನುಗಳಿಂದ ಒಂದೇ ಸಮನೆ ಗುಂಡಿನ ಮಳೆಗರೆಯುತ್ತಿದ್ದರೂ ಭಯಪಡದೇ ಮುನ್ನುಗ್ಗುತ್ತಿದ್ದ. ಮೇಲಿನ‌ ಬಂಕರ್ ಗಳಿಂದ ಗ್ರೇನೇಡು ಗಳು ನಮ್ಮ ಸೈನಿಕರ ಪಕ್ಕಕ್ಕೇ ಬಂದು ಬೀಳುತ್ತಿದ್ದವು. ಆ ವಿಸ್ಫೋಟಕ್ಕೆ‌ ಸಿಲುಕಿ‌ ಪೀರು ಸಿಂಗ್ ಜತೆಗಿದ್ದ ಅರ್ಧದಷ್ಟು ಸೈನಿಕರು ವೀರಮರಣವನ್ನಪ್ಪಿದ್ದರು. ಅವರೆಲ್ಲರ ದೇಹಗಳು ಛಿದ್ರವಾಗಿ ಬೀಳುತ್ತಿದ್ದರೆ ಪೀರು ಸಿಂಗ್ ಮಾತ್ರ ಶತ್ರುವಿನೆಡೆಗೆ ರಾಕ್ಷಸನಂತೆ ಆಕ್ರಮಣ ಮಾಡುತ್ತ ಮುನ್ನುಗ್ಗುತ್ತಿದ್ದ. ಶತ್ರುವಿನ ತೀರಾ ಸಮೀಪಕ್ಕೆ ಬಂದ ಪೀರುಸಿಂಗ್ ಆತನ ಎದುರಿನಲ್ಲಿದ್ದ ಶತ್ರು ಮಿಷಿನ್ ಗನ್ನರ್ ಗಳ ಸದ್ದಡಿಗಿಸುವಲ್ಲಿ ಸಫಲನಾಗಿದ್ದ. ಆದರೆ ಆತನ ಜತೆಗಿದ್ದ ಎಲ್ಲ ಸೈನಿಕರೂ ಹೋರಾಡುವ ಸ್ಥಿತಿಯಲ್ಲಿ‌ ಇರಲಿಲ್ಲ. ಆತನ‌ ಜತೆಗೆ ಮುನ್ನುಗ್ಗಿದ್ದವರಲ್ಲಿ ಬಹುತೇಕರು ಹುತಾತ್ಮರಾಗಿದ್ದರೆ ಉಳಿದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು.

ಶತ್ರುವಿನ ಮೂರು ಬಂಕರ್ ಗಳಿದ್ದವು. ಒಂದು ಬಂಕರ್ ನಮ್ಮ ಕೈವಶವಾಗಿತ್ತು. ಇನ್ನೆರಡು ಬಂಕರ್ ಗಳನ್ನು ವಶಪಡಿಸಿಕೊಳ್ಳಲು ಪೀರು‌ ಸಿಂಗ್ ಏಕಾಂಗಿಯಾಗಿ ತನ್ನ ಸ್ಟನ್ನರ್ ಬಂದೂಕಿನಿಂದ ದಾಳಿ ನಡೆಸಿದ.ಎರಡನೇ ಬಂಕರ್ ವಶಪಡಿಸಿಕೊಳ್ಳುವ ಹೊತ್ತಿಗೆ ಶತ್ರುವಿನ ಕಡೆಯಿಂದ ಹಾರಿ ಬಂದ ಗ್ರೆನೇಡ್ ಸ್ಫೋಟಿಸಿ ಪೀರು‌ಸಿಂಗ್ ನ ಮುಖ ಛಿದ್ರವಾಗಿತ್ತು. ಅರ್ಧ ಮುಖ ಸುಟ್ಟು ಹೋಗಿ ಅದರಿಂದ ರಕ್ತ ಬಸಿಯುತ್ತಿತ್ತು. ಇನ್ನೊಂದೇ ಬಂಕರ್.. ಅದನ್ನು ವಶಪಡಿಸೊಕೊಂಡರೆ ಶತ್ರು ನಾಶವಾಗುತ್ತಾನೆ ಎಂದು ತಿಳಿದ ಪೀರು ಸಿಂಗ್ ತನ್ನ ಛಿದ್ರವಾಗಿದ್ದ ದೇಹದೊಂದಿಗೆ ದಾಳಿ‌ ಮುಂದುವರೆಸಿದ. ಕೈಯಲ್ಲಿ‌ ಗ್ರೆನೇಡು ಹಿಡಿದು ಮುನ್ನುಗ್ಗಿ ‘ರಾಜಾ ರಾಮಚಂದ್ರ ಕೀ‌ಜೈ’ ಎಂದು ಕೂಗುತ್ತ ಶತ್ರುವಿನ‌ ಬಂಕರಿನ ಮೇಲೆ ಗ್ರೆನೇಡು ಎಸೆದ. ಆದರೆ ಅಷ್ಟರಲ್ಲಿ ಶತ್ರಿವಿನ ಗುಂಡೊಂದು ಪೀರು‌ಸಿಂಗನ ತಲೆಯನ್ನು ಸೀಳಿತ್ತು. ಪೀರು‌ ಸಿಂಗ್ ಕೊನೆಯ ಉಸಿರು ಎಳೆಯುವಷ್ಟರಲ್ಲಿ ಆತ ಎಸೆದಿದ್ದ ಗ್ರೆನೇಡು ಸ್ಪೋಟಗೊಂಡಿತ್ತು. ಶತ್ರು ನೆಲಕ್ಕುರುಳಿದ್ದ. ಪೀರು ಸಿಂಗ್ ಹುತಾತ್ಮ‌ನಾಗಿದ್ದ ಆದರೆ ಶತ್ರುವಿನ ಕೈಯಲ್ಲಿದ್ದ ಬಂಕರ್ ನಮ್ಮ ಕೈವಶವಾಗಿತ್ತು.

ಆತನ‌ ಈ‌ ಅಪ್ರತಿಮ ಸಾಹಸಕ್ಕೆ, ಮಣಿಯದ ಹೋರಾಟಕ್ಕೆ ಆತನಿಗೆ ಭಾರತೀಯ ಸೇನೆಯ ಅತುನ್ನತ ಗೌರವವಾದ “ಪರಮ ವೀರ ಚಕ್ರ”ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು. ವೀರಾವೇಶದಿಂದ ಹೋರಾಡಿ ಶತ್ರುವನ್ನು ಸದೆಬಡಿದ ಪೀರು ಸಿಂಗನ‌ ತ್ಯಾಗವನ್ನು ಸ್ಮರಿಸಲೆಂದೇ ಆತನ ಹೆಸರನ್ನು ಇತ್ತಿಚೆಗೆ ಅಂಡಮಾನಿನ‌ ದ್ವೀಪವೊಂದಕ್ಕಿಟ್ಟು ಗೌರವ ಸಲ್ಲಿಸಲಾಗಿದೆ. ಆತನ ದೇಶಭಕ್ತಿ‌ ನಮ್ಮೆಲ್ಲರಿಗೂ ಎಂದಿಗೂ ಸ್ಪೂರ್ತಿ‌ನೀಡುವಂತಾದಾದಾಗ ಮಾತ್ರ ಆತನ್ ತ್ಯಾಗಕ್ಕೊಂದು ಸಾರ್ಥಕತೆ ಸಿಕ್ಕೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!