ಬಹಿರಂಗವಾಯಿತು ‘ಸರಳ ವಾಸ್ತು’ ಗುರೂಜಿ ಹತ್ಯೆಯ ಹಿಂದಿನ ರಹಸ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

‘ಸರಳ ವಾಸ್ತು’ ಖ್ಯಾತಿ ಚಂದ್ರಶೇಖರ್ ಗುರೂಜಿ ಹತ್ಯೆ ಕುರಿತು ಹಂತಕರು ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದು, ಗುರೂಜಿ ಮತ್ತು ಅವರ ಬೆಂಬಲಿಗರು ತಮಗೆ ಸಾಕಷ್ಟು ಚಿತ್ರಹಿಂಸೆ ನೀಡಿದ್ದರಿಂದ ಈ ಕೊಲೆಯನ್ನು ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಪೊಲೀಸರು ಆರೋಪಿಗಳನ್ನು ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ಮತ್ತು ಪಿತೂರಿಯನ್ನು ಕಂಡುಹಿಡಿಯಲು ಪೊಲೀಸರು ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಗುರೂಜಿ ಅವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಪ್ರಾರಂಭಿಸಿದ್ದರು. ವಾಸ್ತು ಪ್ರಕಾರ ಮನೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದರು. ಮುಂಬೈ, ಬೆಂಗಳೂರು, ಹುಬ್ಬಳ್ಳಿ ಮತ್ತು ಇತರ ನಗರಗಳಲ್ಲಿ ಕಚೇರಿಗಳನ್ನು ಹೊಂದಿರುವ ಗುರೂಜಿ ಅವರ ಸಂಸ್ಥೆಯು ಭಾರಿ ಮೊತ್ತದ ಹಣವನ್ನು ವಹಿವಾಟುಗಳಿಂದ ಗಳಿಸಿದೆ. ಮಹಾಂತೇಶ್ ಸೇರಿದಂತೆ ಹಲವು ಉದ್ಯೋಗಿಗಳ ಹೆಸರಿನಲ್ಲಿ ಅಪಾರ ಆಸ್ತಿಯನ್ನು ಗುರೂಜಿ ಹೊಂದಿದ್ದರು. ಗುರೂಜಿಯವರ ಹಣಕಾಸು ನೋಡಿಕೊಳ್ಳುತ್ತಿದ್ದ ಮಹಾಂತೇಶ ಶಿರೂರು ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನೋಂದಣಿಯಾಗಿದೆ.
ಮಹಾಂತೇಶ್ 2016 ರಲ್ಲಿ ಸರಳ ವಾಸ್ತು ಕೆಲಸ ತೊರೆದಿದ್ದ. ನಂತರ, ಗುರೂಜಿ ಶಿರೂರು ಬಳಿ ಆಸ್ತಿಯನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದರು. ಇದು ಕೊಲೆಗೆ ಕಾರಣವಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆರೋಪಿಯು ಗುರೂಜಿಯನ್ನು 42 ಬಾರಿ ಇರಿದಿದ್ದಾನೆ ಮತ್ತು ಅವರ ಗಂಟಲನ್ನು ಸಹ ಕತ್ತರಿಸಿದ್ದಾನೆ ಎಂದು ತಿಳಿದುಬಂದಿದೆ.
ಚಂದ್ರಶೇಖರ್ ಗುರೂಜಿ ಅವರನ್ನು ಆರೋಪಿಗಳು ಹಾಡಹಗಲೇ ಹುಬ್ಬಳ್ಳಿಯ ಹೋಟೆಲ್ ನಲ್ಲಿ ಕೊಲೆ ಮಾಡಿದ್ದಾರೆ. ಈ ಘಟನೆಯು ಹೋಟೆಲ್ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊಲೆಯಾದ ನಾಲ್ಕು ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಅವರು ಗುರೂಜಿ ತಮಗೆ ಕಿರುಕುಳ ನೀಡುತ್ತಿದ್ದರು ಹೀಗಾಗಿ ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!