Tuesday, May 30, 2023

Latest Posts

ಫಾಕ್ಸ್‌ಕಾನ್ ಸೇರಿ 18 ಯೋಜನೆಗಳಿಗೆ ಅನುಮೋದನೆ: ಸಾವಿರಾರು ಜನರಿಗೆ ಉದ್ಯೋಗಾವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 61ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯಿಂದ ಫಾಕ್ಸ್‌ಕಾನ್ ಸೇರಿದಂತೆ 75,393.57 ಕೋಟಿ ರೂ. ಮೊತ್ತದ 18 ಯೋಜನೆಗಳಿಗೆ ಅನುಮೋದನೆ ದೊರೆತಿದೆ.

ಫಾಕ್ಸ್‌ಕಾನ್ ಹಾನ್ ಹೈ ಟೆಕ್ನಾಲಜಿ ಇಂಡಿಯಾ ಮೆಗಾ ಡೆವಲಪ್ ಮೆಂಟ್ ಪ್ರೈ.ಲಿ. (ಎಫ್ ಎಚ್ ಎಚ್) 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ 8,000 ಕೋಟಿ ರೂ. ವೆಚ್ಚದ ಯೋಜನೆ ಅನುಷ್ಠಾನಕ್ಕೆ ಮಾರ್ಚ್‌ 20ರಂದು ಒಪ್ಪಿಗೆ ನೀಡಲಾಯಿತು. 15 ದಿನಗಳ ಹಿಂದೆ ಫಾಕ್ಸ್‌ಕಾನ್ ಸಿಇಒ ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿತ್ತು.

ಗೃಹ ಕಚೇರಿ ಕೃಷ್ಣಾದಲ್ಲಿ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಾಕ್ಸ್‌ಕಾನ್ ಸೇರಿದಂತೆ 10 ಹೊಸ ಯೋಜನೆಗಳು, 5 ವಿಸ್ತರಣೆ ಯೋಜನೆಗಳು ಮತ್ತು 3 ಹೆಚ್ಚುವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ 18 ಯೋಜನೆಗಳಿಂದ 77,606 ಜನರಿಗೆ ಉದ್ಯೋಗಾವಕಾಶವನ್ನು ನಿರೀಕ್ಷಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಗ್ರೀನ್ ಹೈಡ್ರೋಜನ್, ಎಥೆನಾಲ್ ಉತ್ಪಾದನೆ, ಪವನ ವಿದ್ಯುತ್ ಸ್ಥಾವರ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಜೋಡಣೆ, ಲೀಥಿಯಂ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ವಾಹನಗಳು, ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳ ಪ್ರಸ್ತಾವನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಜ್ಯಕ್ಕೆ ಇಷ್ಟು ದೊಡ್ಡ ಮೊತ್ತದ ಬಂಡವಾಳ ಹರಿದುಬಂದಿರುವುದು ಸಂತಸ ತಂದಿದೆ. ಈ ಯೋಜನೆಗಳು ರಾಜ್ಯದ ಕೈಗಾರಿಕಾ ಪ್ರಗತಿಗೆ ಮತ್ತಷ್ಟು ವೇಗ ನೀಡಲಿದೆ. ರಾಷ್ಟ್ರದ ಉತ್ಪಾದನಾ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹವಾಗಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ ಮಾತನಾಡಿ, “ಹೂಡಿಕೆ ಪ್ರಸ್ತಾವನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಉದ್ಯಮ ಸ್ನೇಹಿ ನೀತಿಗಳು ಮತ್ತು ಉದ್ಯಮಗಳಿಗೆ ಪೂರಕ ಪರಿಸರ ವ್ಯವಸ್ಥೆಗೆ ಈ ಹೂಡಿಕೆಗಳು ಸಾಕ್ಷಿಯಾಗಿವೆ. ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ” ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!