ಮೈಸೂರು-ಬೆಂಗಳೂರು ವೇಗದ ಹೆದ್ದಾರಿ 10 ಪಥ ಅಲ್ಲ ಎಂಬ ಅಪಪ್ರಚಾರ- ಇಲ್ಲಿದೆ ಫ್ಯಾಕ್ಟ್ ಚೆಕ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೆ ದೇಶಾದ್ಯಂತ ಸುದ್ದಿಯಾಗುತ್ತ, ಸಾಮಾಜಿಕ ಮಾಧ್ಯಮದಲ್ಲಿ ಜನರಿಂದ ಬಹುಮೆಚ್ಚಿಗೆ ಪಡೆಯುತ್ತಿರುವ ಹೊತ್ತಿನಲ್ಲಿ ಇದರ ಶ್ರೇಯಸ್ಸನ್ನು ತಗ್ಗಿಸುವ ಹಲವು ಪ್ರಯತ್ನಗಳು ಬಿಜೆಪಿಯ ರಾಜಕೀಯ ಎದುರಾಳಿಗಳಿಂದ ಹಲವು ರೀತಿಯಲ್ಲಿ ಆಗುತ್ತ ಬಂದಿವೆ.

ಇದೀಗ, ಕೆಲವು ರಾಜಕಾರಣಿಗಳು ಮತ್ತು ಮಾಧ್ಯಮದ ಒಂದು ವರ್ಗ ಸೇರಿಕೊಂಡು ಮಾಡುತ್ತಿರುವ ಆರೋಪ ಎಂದರೆ, ಕೇವಲ ಆರು ಲೇನ್ ಗಳ ಹೆದ್ದಾರಿಯನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಹತ್ತು ಲೇನ್ ಎಂದು ಬಿಂಬಿಸುತ್ತಿವೆ ಅನ್ನೋದು. ಹೀಗೆ ಆರೋಪಿಸುವವರು ಬಳಸಿಕೊಂಡಿರುವ ಮೈಸೂರು-ಬೆಂಗಳೂರು ಹೆದ್ದಾರಿ ಫೋಟೊಗಳು ಸಹ ಮೇಲ್ನೋಟಕ್ಕೆ “ಹೌದಲ್ಲ, ಇವರ ವಾದ ಸರಿ ಇದೆ” ಎಂದು ಸಾಮಾನ್ಯರಿಗೆ ಅನಿಸುವ ಹಾಗಿದೆ. ಆದರೆ ಇವರೆಲ್ಲ ಆ ಹೆದ್ದಾರಿಯ ಮೇಲ್ಸೇತುವೆ ಭಾಗದ ಒಂದು ಫೋಟೊ ಮುಂದಿಟ್ಟು ಜನರಲ್ಲಿ ಗೊಂದಲ ಎಬ್ಬಿಸುತ್ತಿದ್ದಾರೆಂಬುದು ಸ್ಪಷ್ಟ.

ತಮಿಳುನಾಡಿನ ವಿತ್ತಮಂತ್ರಿ ಟಿ ಆರ್ ಬಿ ರಾಜಾ ಅವರು ಕರ್ನಾಟಕದ ಮುಖ್ಯಮಂತ್ರಿ ಮಾಡಿದ್ದ ಟ್ವೀಟ್ ಒಂದನ್ನು ಉಲ್ಲೇಖಿಸುತ್ತ, ‘ಸಂಘಿಗಳ ನಾಚಿಕೆಯಿಲ್ಲದ ಸುಳ್ಳು’ ಎಂಬ ಕಟುಶಬ್ದ ಬಳಸಿದ್ದಾರೆ.

 

ಸ್ಕ್ರಾಲ್ ಎಂಬ ಡಿಜಿಟಲ್ ಸುದ್ದಿತಾಣ ಸಹ, ‘ಕರ್ನಾಟಕದ ಮುಖ್ಯಮಂತ್ರಿ ತಮ್ಮದು 10 ಪಥಗಳ ವಿಶ್ವದರ್ಜೆಯ ಹೆದ್ದಾರಿ ಎಂದು ಪೋಸ್ಟ್ ಮಾಡಿರೊ ವಿಡಿಯೋಕ್ಕೆ ಜನ ನಗಾಡುತ್ತಿದ್ದಾರೆ. ಏಕೆಂದರೆ ಅಲ್ಲಿ ಆರು ಪಥಗಳಷ್ಟೇ ಕಾಣುತ್ತಿವೆ’ ಎಂದು ಸುದ್ದಿ ಬರೆದಿದೆ. ಜತೆಗೆ ನಿರ್ದಿಷ್ಟ ಚಿತ್ರವನ್ನೂ ಲಗತ್ತಿಸಿದೆ. ಆ ಪ್ರಕಾರ ಅಲ್ಲಿ ಕಾಣುತ್ತಿರುವುದು ಆರೇ ಪಥ.

ಹಾಗಾದರೆ, ಮೈಸೂರು-ಬೆಂಗಳೂರು ಹೆದ್ದಾರಿ ದಶಪಥ ಅಲ್ಲವಾ?

ವಾಸ್ತವ ಏನೆಂದರೆ, ಹೀಗೆ ಆರೋಪ ಮಾಡುತ್ತಿರುವವರು ಆರು ಪಥಗಳ ಮುಖ್ಯ ಹೆದ್ದಾರಿಯ ಎರಡೂ ಪಕ್ಕದಲ್ಲಿ ನಿರ್ಮಾಣವಾಗಿರುವ ಸರ್ವೀಸ್ ರಸ್ತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಪ್ರತಿ ಪಕ್ಕದ ರಸ್ತೆ ತಲಾ ಎರಡು ಪಥಗಳಿದ್ದು, ಅದೂ ಸಹ ಎಕ್ಸ್ ಪ್ರೆಸ್ ವೇ ಭಾಗವಾಗಿಯೇ ನಿರ್ಮಾಣವಾಗಿರುವಂಥದ್ದು. ಕೆಲವೆಡೆ ಮೇಲ್ಸೆತುವೆಗಳು ಬಂದಂಥ ಸಂದರ್ಭದಲ್ಲಿ ಈ ಸರ್ವೀಸ್ ರಸ್ತೆ ಮೊಟಕಾಗುತ್ತದೆ. ಅಂತಹುದೇ ಸಂದರ್ಭದ ಒಂದು ಚಿತ್ರ ತೆಗೆದುಕೊಂಡು ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇ ಕೇವಲ ಆರು ಪಥಗಳದ್ದು ಎನ್ನುವ ಮಿಥ್ಯೆಯನ್ನು ಸೃಷ್ಟಿಸಲಾಗುತ್ತಿದೆ.

ಬೊಮ್ಮಾಯಿ ಅವರು ಮಾಡಿರುವ ವಿಡಿಯೊ ಲಗತ್ತಾದ ಟ್ವೀಟ್ ಅನ್ನೇ ಗಮನಿಸಿದರೂ, ಅದರಲ್ಲಿ ರೈಲ್ವೆ ಲೇನ್ ಬರುವುದಕ್ಕೂ ಮುಂಚೆ ಒಂದು ಪಾರ್ಶ್ವದ ದ್ವಿಪಥ ಸರ್ವೀಸ್ ರಸ್ತೆ ನಿಮ್ಮ ನೋಟಕ್ಕೆ ಸಿಗುತ್ತದೆ.

ಈ ಸತ್ಯಗಳನ್ನು ತಿರುಚಿ ಮೈಸೂರು-ಬೆಂಗಳೂರು ಹೆದ್ದಾರಿ ದಶಪಥ ಅಲ್ಲ ಎಂಬ ದಿಕ್ಕುತಪ್ಪಿಸುವ ವ್ಯಾಖ್ಯಾನ ಕಟ್ಟಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!