ಕೊಡವ ಸಮಾಜಗಳೇ ತಮ್ಮ ಜನಾಂಗಕ್ಕೆ ಮಾರ್ಗದರ್ಶಕವಾಗಬೇಕು: ಸುಜಾ ಕುಶಾಲಪ್ಪ ಅಭಿಮತ

ಹೊಸದಿಗಂತ ವರದಿ, ಪೊನ್ನಂಪೇಟೆ:

ಕೊಡವ ಸಮುದಾಯಕ್ಕೆ ಮಠ ಹಾಗೂ ಗುರುಗಳಿಲ್ಲ. ಆದ್ದರಿಂದ ಕೊಡವ ಸಮಾಜಗಳು ಜನಾಂಗವನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಮುನ್ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಅಭಿಮತ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜಾಗ ಮಾರಾಟ ಮಾಡದಿರಿ:
ಕೊಡವರು ತಮ್ಮ ಜಾಗವನ್ನು ಮಾರಾಟ ಮಾಡುವುದರಿಂದ ಜನಾಂಗದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ತಮ್ಮ ಜಾಗ ಮಾರಾಟ ಮಾಡಿ ಹೊರ ರಾಜ್ಯದವರಿಗೆ ಇಲ್ಲಿ ನೆಲೆಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಎಲ್ಲಿಯೋ ಉದ್ಯೋಗ ಮಾಡುವ ಬದಲು ಜಾಗವನ್ನು ಮಾರಾಟ ಮಾಡದೆ ತಮ್ಮ ಭೂಮಿಯಲ್ಲೇ ವೈಜ್ಞಾನಿಕವಾಗಿ ಆಧುನಿಕ ಕೃಷಿ ಪದ್ದತಿಯ ಮೂಲಕ ನೆಲೆ ಕಂಡುಕೊಂಡು ಲಾಭ ಗಳಿಸಬೇಕೆಂದು ಕರೆ ನೀಡಿದರು.

ಕ್ಷೀಣಿಸುತ್ತಿರುವ ಜನಸಂಖ್ಯೆ: ಕೊಡವ ಜನಾಂಗದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಇದೊಂದು ಅಪಾಯಕಾರಿ ಸೂಚನೆಯಾಗಿದೆ. ಇದರ ಬಗ್ಗೆ ಗಂಭೀರವಾಗಿ ಕೊಡವ ಸಮುದಾಯ ಚಿಂತಿಸಬೇಕೆಂದ ಅವರು, ಅಧಿಕಾರ ಇಲ್ಲದಿದ್ದಾಗಲೂ ಜನರ ಕೆಲಸವನ್ನು ಮಾಡಿದ್ದು, ಈಗ ಅಧಿಕಾರ ಸಿಕ್ಕಿದಾಗಲೂ ಸಹ ಜನರ ಕೆಲಸವನ್ನು ಮಾಡುವುದಾಗಿ ಭರವಸೆ ನೀಡಿದರು. ಹಿರಿಯರು ನಮ್ಮ ಪಕ್ಷವನ್ನು ಕಷ್ಟಪಟ್ಟು ಕಟ್ಟಿದ್ದರಿಂದ ನಾನು ವಿಧಾನಪರಿಷತ್ ಸದಸ್ಯನಾಗಲು ಕಾರಣವಾಗಿದೆ. ಆದ್ದರಿಂದ ಅವರನ್ನು ಎಂದೂ ಮರೆಯುವುದಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜದ ಅಧ್ಯಕ್ಷ ಚೊಟ್ಟೆಯಕ್‍ಮಾಡ ರಾಜೀವ್ ಬೋಪಯ್ಯ ಅವರು ಜಿಲ್ಲೆಯ ಯಾವುದೇ ಹೋರಾಟ, ಯಾವುದೇ ಪಕ್ಷಕ್ಕೆ ಸಂಘಟನೆ ಮತ್ತು ಹಣಕಾಸು ನೆರವನ್ನು ದಕ್ಷಿಣ ಕೊಡಗು ಯಥೇಚ್ಚವಾಗಿ ನೀಡುತ್ತಾ ಬಂದಿದೆ. ಆದರೆ, ರಾಜಕೀಯ ಪಕ್ಷದಲ್ಲಿ ದಕ್ಷಿಣ ಕೊಡಗಿನ ಜನರಿಗೆ ಅಧಿಕಾರ ಸಿಗುತ್ತಿಲ್ಲ. ಇದರ ನಡುವೆ ಹೋರಾಟದಿಂದ ಸುಜಾ ಕುಶಾಲಪ್ಪ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ನಾಯಿ ಬಾಲವನ್ನು ಅಲ್ಲಾಡಿಸಬೇಕೆ ಹೊರತು ಬಾಲ ನಾಯಿಯನ್ನು ಅಲ್ಲಾಡಿಸಬಾರದೆಂದು ಮಾರ್ಮಿಕವಾಗಿ ನುಡಿದರು.

ಕೊಡವ ಸಮಾಜದ ನ್ಯಾಯ ಪೀಠದ ಅಧ್ಯಕ್ಷ ಚೆರಿಯಪಂಡ ಉಮೇಶ್ ಉತ್ತಪ್ಪ ಅವರು ಮಾತನಾಡಿ ಇಂದು ಪಕ್ಷ ಒಬ್ಬರ ಸ್ವತ್ತಾಗಬಾರದು. ಜನರ ಭಾವನೆಗೆ ಸ್ಪಂದಿಸಿ ಕೆಲಸ ಮಾಡಿ ಪಕ್ಷವನ್ನು ದುಡಿದು ಕಟ್ಟಿದ ಹಿರಿಯರನ್ನು ಎಲ್ಲರೂ ಕೃತಜ್ಞತೆ ಭಾವದಿಂದ ಸ್ಮರಿಸಬೇಕಾಗಿದೆ ಎಂದು ಹೇಳಿದರಲ್ಲದೆ, ಜನಸಂಘದ ಕಾಲದಿಂದ ಪಕ್ಷವನ್ನು ಕಟ್ಟಿದ ಇತಿಹಾಸವನ್ನು ವಿವರಿಸಿದರು.

ಚಿರಿಯಪಂಡ ರಾಜ ನಂಜಪ್ಪ ಅವರು ಮಾತನಾಡಿ ಸುಜಾಕುಶಾಲಪ್ಪ ಅವರು ಪಕ್ಷವನ್ನು ಜಿಲ್ಲೆಯಲ್ಲಿ ತನು, ಮನ, ಧನ ನೀಡಿ ಕಟ್ಟಲು ದುಡಿದಿದ್ದಾರೆ. ಈಗಿನ ಬಹಳಷ್ಟು ಯುವಕರಿಗೆ ಹಿರಿಯರು ಪಕ್ಷ ಕಟ್ಟಿದ ಬಗ್ಗೆ ಅರಿವಿಲ್ಲ ಎಂದು ಹೇಳಿದರು.
ವೇದಿಕೆಯಲ್ಲಿ ಸಮಾಜದ ನಿರ್ದೇಶಕರಾದ ಮಲ್ಲಮಾಡ ಪ್ರಭು ಪೂಣಚ್ಚ, ಮಂಡಚಂಡ ದಿನೇಶ್‍ ಚಿಟ್ಟಿಯಪ್ಪ, ಅಡ್ಡಂಡ ಸುನಿಲ್, ಚೆಪ್ಪುಡಿರ ರಾಕೇಶ್‍ ದೇವಯ್ಯ, ಮೂಕಳಮಾಡ ಅರಸು ನಂಜಪ್ಪ, ಮೂಕಳೇರ ಲಕ್ಷ್ಮಣ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!