ರಾಜ್ಯ ಎಲ್ಲಾ ವಿವಿ, ಕಾಲೇಜುಗಳಿಗೆ ಏಕರೂಪದ ‘ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟಿಸಿದ ರಾಜ್ಯ ಸರಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

2022-23ನೇ ಶೈಕ್ಷಣಿಕ ಸಾಲಿನ ಸ್ನಾತಕ, ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಈ ಪಟ್ಟಿ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪದ ವೇಳಾಪಟ್ಟಿಯಾಗಿದೆ.

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಈ ಏಕರೂಪದ ಪಟ್ಟಿಯಂತೆ, ರಾಜ್ಯದ ಉದ್ದಗಲಕ್ಕೂ ಪದವಿ ತರಗತಿಗಳಿಗೆ ಜುಲೈ 11ರಿಂದ ಪ್ರವೇಶಾತಿ ಆರಂಭವಾಗಲಿದ್ದು, ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಸ್ನಾತಕೋತ್ತರ ಕೋರ್ಸ್‌ಗಳಿಗೆ ಅಕ್ಟೋಬರ್ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 2ರಿಂದ 14ರ ನಡುವೆ ತರಗತಿಗಳಿಗೆ ಚಾಲನೆ ಸಿಗಲಿದೆ ಎಂಬುದಾಗಿ ಹೇಳಿದ್ದಾರೆ.

ಇದುವರೆಗೂ ರಾಜ್ಯದಲ್ಲಿ ಒಂದೊಂದು ವಿ.ವಿ.ಯೂ ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿ ಕೊಳ್ಳುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲ ಆಗುತ್ತಿತ್ತು. ಇದೀಗ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಏಕರೂಪದ ವೇಳಾಪಟ್ಟಿಯನ್ನು ತರಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ವೇಳಾಪಟ್ಟಿಯಲ್ಲಿ ಪ್ರತೀ ಸೆಮಿಸ್ಟರುಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ಪ್ರತಿ ಸೆಮಿಸ್ಟರುಗಳಿಗೆ ಬೋಧನಾ ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಪಟ್ಟಿಯಲ್ಲಿ ಪದವಿಯ 6, ಸ್ನಾತಕೋತ್ತರ ಮಟ್ಟದ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರುಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಸೆಮಿಸ್ಟರ್ ಮುಗಿದ ನಂತರದ ರಜೆ ಅವಧಿಯಲ್ಲಿ ಪರೀಕ್ಷಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಅವರು ಹೇಳಿದರು.

ಈ ಎಲ್ಲಾ ಹಿನ್ನಲೆಯಲ್ಲಿ 2022-23ನೇ ಸಾಲಿನ ಸ್ನಾತಕ, ಸ್ನಾತಕೋತ್ತರ ಶೈಕ್ಷಣಿಕ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ವಿಶ್ವವಿದ್ಯಾಲಯಗಳು, ಕಾಲೇಜು ಶಿಕ್ಷಣ, ಅನುದಾನ, ಅನುದಾನ ರಹಿತ ಕಾಲೇಜುಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಈ ಕೆಳಕಂಡಂತೆ ಒಂದೇ ಶೈಕ್ಷಣಿಕ ವೇಳಾಪಟ್ಟಿಯನ್ನು ಜಾರಿಗೊಳಿಸಲು ಆದೇಶಿಸಿದ್ದಾರೆ.

ಉನ್ನತ ಶಿಕ್ಷಣ ಪರಿಷತ್ ಮುಖ್ಯಸ್ಥರಾದ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲಾ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ಸ್ ಜತೆ ವರ್ಚುಯಲ್ ಸಭೆ ನಡೆಸಿ, ಸಮಾಲೋಚನೆ ನಡೆಸಲಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!