ಹೊಸ ದಿಗಂತ ವರದಿ, ಮಂಡ್ಯ:
ವಿರೋಧದ ನಡುವೆಯೂ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆ ಮಂಡ್ಯ ತಾಲೂಕಿನ ಬಿ.ಹೊಸೂರು ಕಾಲೋನಿಯಲ್ಲಿ ನಡೆಯಿತು.
ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮಸ್ಥರು, ಬೀರೇಶ್ವರ ದೇವಸ್ಥಾನದ ಉದ್ಘಾಟನೆ, ಹಿರಿಯಮ್ಮ ಮತ್ತು ಏಳೂರಮ್ಮ ದೇವರ ಹಬ್ಬದ ಪ್ರಯುಕ್ತ 2ನೇ ವರ್ಷದ ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆ ಆಯೋಜಿಸಿದ್ದರು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಜೋಡೆತ್ತುಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದರು.
ಆಯೋಜಕರು ಸ್ಪರ್ಧೆಗಾಗಿ ಎಸ್ಪಿ, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟವರ ಅನುಮತಿ ಪಡೆದು ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಸಿದ್ಧತೆಯಂತೆ ಭಾನುವಾರ ಬೆಳಿಗ್ಗೆ ಸ್ಪರ್ಧೆಗೆ ಸಜ್ಜಾಗಿದ್ದ ಸಂಧರ್ಭದಲ್ಲಿ ಮಂಡ್ಯ ತಹಸೀಲ್ದಾರ್ ಚಂದ್ರಶೇಖರ್ ಶಂ.ಗಾಳಿ ಹಾಗೂ ಕೆರಗೋಡು ಪೊಲೀಸರು ಏಕಾಏಕಿ ಸ್ಥಳಕ್ಕೆ ಆಗಮಿಸಿ ಸ್ಪರ್ಧೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ. ಕೂಡಲೇ ಸ್ಪರ್ಧೆ ರದ್ದು ಮಾಡುವಂತೆ ಸೂಚಿಸಿದರು.
ಈ ವೇಳೆ ಸ್ಪರ್ಧೆ ಆಯೋಜಕರು ಹಾಗೂ ಗ್ರಾಮದ ಹಿರಿಯರು ತಹಸೀಲ್ದಾರ್ ಮನವೊಲಿಸಿದ ಪರಿಣಾಮ ಷರತ್ತು ಉಲ್ಲಂಘಿಸದೆ ಸ್ಪರ್ಧೆ ನಡೆಸಲು ಅನುಮತಿ ನೀಡಿದರು.
ಸ್ಪರ್ಧೆಯಲ್ಲಿ ಸುಮಾರು 40 ಜೊತೆ ಜೋಡೆತ್ತುಗಳು ಭಾಗಿ
ಸ್ಪರ್ಧೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಸುಮಾರು 40 ಜೊತೆ ಜೋಡೆತ್ತುಗಳು ಭಾಗಿಯಾಗಿದ್ದವು.
ಮಧ್ಯಾಹ್ನ 3 ಗಂಟೆ ಬಳಿಕ ಸ್ಪರ್ಧೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸ್ಪರ್ಧೆಗೆ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರ ಚಾಲನೆ ನೀಡಿದರು. ಮಾತನಾಡಿದ ಡಾ.ರವೀಂದ್ರ, ಸ್ಪರ್ಧೆ ಆಯೋಜಿಸಿರುವ ಹೆಚ್.ಮಲ್ಲಿಗೆರೆ ಗ್ರಾಮದ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್.ಮಲ್ಲಿಗೆರೆ ಗ್ರಾಮದ ಯುವಕರು ಸಂಘಟನೆಯಿಂದ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆ ಆಯೋಜಿಸಿದ್ದಾರೆ. ಈ ರೀತಿಯ ಸಂಘಟನೆ ಗ್ರಾಮದ ಅಭಿವೃದ್ಧಿಗೂ ಮೀಸಲಿಟ್ಟರೆ, ಗ್ರಾಮಾಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.