ಉಗ್ರಗಾಮಿಗಳ ವಿರುದ್ಧ ಹೋರಾಡುತ್ತಲೇ ಮಡಿದ ʼಪರಮವೀರʼನ ಕತೆ

– ಗಣೇಶ ಭಟ್‌, ಗೋಪಿನಮರಿ

ಸಿಂಹಳೀಯರಿಂದ ನಿರಂತರ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಶ್ರೀಲಂಕಾದಲ್ಲಿನ ತಮಿಳರು ದಂಗೆಯೆದ್ದಿದ್ದರು. ತಮಿಳರೆಲ್ಲ ಒಗ್ಗೂಡಿಕೊಂಡು ʼಎಲ್‌ಟಿಟಿಇʼ ಹುಟ್ಟುಹಾಕಿಕೊಂಡು ಶ್ರೀಲಂಕಾದ ಪಡೆಗಳ ವಿರುದ್ದ ಯುದ್ಧಕ್ಕಿಳಿದಿದ್ದರು. ಪರಿಣಾಮ ಶ್ರೀಲಂಕಾದಲ್ಲಿ ಅಂತರ್ಯುದ್ಧವೇ ನಡೆದಿತ್ತು. ದಶಕಗಳ ಕಾಲ ನಡೆದ ಈ ಅಂತರ್ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆಗೆ ಲೆಕ್ಕವಿಲ್ಲ. ಕೆಲವರು ಅಮಾಯಕರು, ಕೆಲವರು ಅಪರಾಧಿಗಳು, ಕೆಲವರು ತಮಿಳರು, ಕೆಲವರು ಸಿಂಹಳೀಯರು, ಇನ್ನು ಕೆಲವರು ಭಾರತೀಯರು… ಹೌದು, ನೆರೆಯ ಶ್ರೀಲಂಕಾ ಹೊತ್ತಿ ಉರಿಯುವಾಗ ಅಲ್ಲಿ ದಂಗೆಯನ್ನು ಹತ್ತಿಕ್ಕಿ ಶಾಂತಿ ಸ್ಥಾಪಿಸಲು ಭಾರತದ ನಾಯಕತ್ವವು ಶಾಂತಿಪಾಲನಾ ಪಡೆಗಳನ್ನು ಕಳುಹಿಸಿತು. ಎಲ್‌ಟಿಟಿಇ ಉಗ್ರರೊಂದಿಗೆ ಸೆಣೆಸುತ್ತ ಅನೇಕ ಭಾರತೀಯ ಸೈನಿಕರು ಹುತಾತ್ಮರಾಗಿಬಿಟ್ಟರು. ಹೀಗೆ ಶ್ರೀಲಂಕಾದ ಶಾಂತಿ ಸ್ಥಾಪನಾ ಹೋರಾಟದಲ್ಲಿ ಜೀವ ಕಳೆದುಕೊಂಡ ವೀರರ ಪೈಕಿ ಸದಾ ನೆನಪಿನಲ್ಲಿಡಬೇಕಾದಂತಹ ಹೆಸರುಗಳಲ್ಲಿ ʼಮೇಜರ್‌ ರಾಮಸ್ವಾಮಿ ಪರಮೇಶ್ವರನ್‌ʼ ಕೂಡ ಒಂದು.

1946 ಸೆಪ್ಟೆಂಬರ್‌ 13ರಂದು ಬಾಂಬೆಯಲ್ಲಿ ಜನಿಸಿದ ಪರಮೇಶ್ವರನ್‌ ತಮ್ಮ ಕಾಲೇಜು ಶಿಕ್ಷಣದ ನಂತರ ಚೆನ್ನೈನಲ್ಲಿರುವ ಆಫೀಸರ್ಸ್‌ ಟ್ರೇನಿಂಗ್‌ ಅಕಾಡೆಮಿ (OTA)ಯನ್ನು ಸೇರುತ್ತಾರೆ. 1972ರಲ್ಲಿ ಪಾಸ್‌ ಔಟ್‌ ಆದ ಪರಮೇಶ್ವರನ್‌ ಭಾರತೀಯ ಸೇನೆಯ ಮಹಾರ್‌ ರೆಜಿಮೆಂಟಿನ ಭಾಗವಾಗ 15ನೇ ಮಹಾರ್‌ ನಲ್ಲಿ 8 ವರ್ಷಗಳಕಾಲ ಸೇವೆ ಸಲ್ಲಿಸುತ್ತಾರೆ. ಅಲ್ಲಿಂದ 5ನೇ ಮಹಾರ್‌ ಗೆ ಅವರನ್ನು ವರ್ಗಾಯಿಸಲಾಗುತ್ತದೆ. ತಮ್ಮ ಸೇವಾ ಅವಧಿಯಲ್ಲಿ ಈಶಾನ್ಯ ಭಾರತದಲ್ಲಿ ಅನೇಕ ದಂಗೆಗಳನ್ನು ಹತ್ತಿಕ್ಕುವ, ಭಯೋತ್ಪಾದಕರನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪರಮೇಶ್ವರನ್‌ ತಮ್ಮ ಹೋರಾಟದಿಂದಲೇ ಖ್ಯಾತಿ ಗಳಿಸುತ್ತಾರೆ. ಅವರ ಉಕ್ಕಿನಂತಹ ಸಂಕಲ್ಪದಿಂದಾಗಿ ಅವರ ರೆಜಿಮೆಂಟಿನಲ್ಲಿ ಎಲ್ಲರೂ ಅವರನ್ನು ʼಪಾರ್ರೀ ಸಾಹೇಬ್‌ʼ ಎಂತಲೇ ಕರೆಯುತ್ತಿದ್ದರು. ಯಾವುದೇ ಕಾರ್ಯಾಚರಣೆಬರಲಿ ತಮ್ಮ ತಂಡದೊಂದಿಗೆ ಧಾವಿಸುತ್ತಿದ್ದ ರಾಮಸ್ವಾಮಿ ಪರಮೇಶ್ವರನ್‌ ತಂಡದ ಎಲ್ಲರಿಗಿಂತ ಮುಂಚೂಣಿಯಲ್ಲೇ ಇರುತ್ತಿದ್ದರು. ಅವರ ತಂಡದ ಸದಸ್ಯರಿಗೆ ಅವರೆಂದರೆ ಅದೇನೋ ವಿಶೇಷ ಗೌರವ. 1987ರ ಸಮಯದಲ್ಲಿ ಶ್ರೀಲಂಕಾದ ಅಂತರ್ಯುದ್ಧ ಪರಿಸ್ಥಿತಿಗಳನ್ನು ನಿಭಾಯಿಸಲು ಕಳುಹಿಸಿದ ಶಾಂತಿಪಾಲನಾ ಪಡೆಗಳಲ್ಲಿ ಮೊದಲು ಶ್ರೀಲಂಕಾದಲ್ಲಿ ಕಾಲಿರಿಸಿದ್ದು ರಾಮಸ್ವಾಮಿಯವರಿದ್ದ ಪಡೆ. ತಮಿಳು ಉಗ್ರರನ್ನು ಹತ್ತಿಕ್ಕಲೆಂದೇ ʼಆಪರೇಷನ್‌ ಪವನ್‌ʼ ಹೆಸರಿನಲ್ಲಿ ಶಾಂತಿ ಪಾಲನಾ ಕಾರ್ಯಾಚರಣೆ ಆರಂಭಿಸಲಾಗಿತ್ತು.

ನವೆಂಬರ್ 25, 1987 ರ ತಡರಾತ್ರಿ, ಎಲ್‌ಟಿಟಿಇಯ ಭದ್ರಕೋಟೆಯಾದ ಜಾಫ್ನಾದ ಉಡುವಿಲ್ ಬಳಿಯ ಕಾಂತರೋಡೈನಲ್ಲಿ ಶಸ್ತ್ರಾಸ್ತ್ರಗಳ ರವಾನೆಯನ್ನು ತಡೆಯಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.‌ ಜಾಫ್ನಾ‌ ಎಲ್‌ಟಿಟಿಇ ಅತ್ಯಂತ ಪ್ರಬಲವಾಗಿರುವ ಸ್ಥಳವಾಗಿತ್ತು. ಅಂತಹ ಸ್ಥಳದಲ್ಲಿ ಸುಮಾರು 30 ಸೈನಿಕರೊಟ್ಟಿಗೆ ಮೇಜರ್ ಪರಮೇಶ್ವರನ್ ಕಾರ್ಯಾಚರಣೆ ಆರಂಭಿಸಿದರು.

ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಎಲ್‌ಟಿಟಿಇಯ ಉಗ್ರಗಾಮಿಗಳ ದೊಡ್ಡ ಗುಂಪೊಂದು ಅವರ ಮೇಲೆ ದಾಳಿ ನಡೆಸಿತು. ಉಗ್ರರು ನಮ್ಮ ಸೈನಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪರಮೇಶ್ವರನ್ ಅವರ ತಂಡಕ್ಕೆ ಎಲ್ಲಾ ದಿಕ್ಕುಗಳಿಂದ ಗುಂಡಿನ ದಾಳಿ ಎದುರಾಯಿತು. ವಾಸ್ತವದಲ್ಲಿ ಉಗ್ರರ ಕಪಟ ಸಂಚಿಗೆ ಸಿಲುಕಿತ್ತು ಪರಮೇಶ್ವರನ್ ತಂಡ. ಮಿಲಿಟರಿ ಪರಿಭಾಷೆಯಲ್ಲಿ‌‌ ಇದನ್ನು ಆಂಬುಷ್ ಎಂದು ಕರೆಯಲಾಗುತ್ತದೆ.

ಉಗ್ರರು AK-47, ಗ್ರೆನೇಡ್‌ಗಳು, ಸ್ಫೋಟಕಗಳು ಮತ್ತು HMG (ಹೆವಿ ಮೆಷಿನ್ ಗನ್)ಗಳನ್ನು ಬಳಸಿ ಮಾರಣಾಂತಿಕ‌ ದಾಳಿ ನಡೆಸುತ್ತಿದ್ದರು. ಇದು ನಮ್ಮ ಸೈನಿಕರಿಗೆ ಭಾರೀ ಹಾನಿಯನ್ನುಂಟುಮಾಡಿತು. ಸುತ್ತಲಿನ ಪ್ರದೇಶದಲ್ಲಿ ಲ್ಯಾಂಡ್ ಮೈನ್ ಅರ್ಥಾತ್ ನೆಲ ಬಾಂಬುಗಳನ್ನು ಹೂತಿಡಲಾಗಿತ್ತು. ಶತ್ರುಗಳು ಸಂಪೂರ್ಣ ಅನುಕೂಲ ದಲ್ಲಿದ್ದ ರು. ಇಂತಹ ಸಂದರ್ಭದಲ್ಲಿ‌ ಗಟ್ಟಿ‌ ಗುಂಡಿಗೆಯ ಪರಮೇಶ್ವರನ್ ಪರಿಸ್ಥಿತಿಯ ಗಂಭೀರತೆಯನ್ನು ಪರಿಶೀಲಿಸಿ‌ ಉಗ್ರರ ಹೊಂಚುದಾಳಿಗೆ ಪ್ರತಿದಾಳಿ ಆರಂಭಿಸಲು ನಿರ್ಧರಿಸಿದರು. ತಮ್ಮ 10 ಸೈನಿಕರ ತಂಡದೊಂದಿಗೆ HMG ಗಳ ಮುಖಾಂತರ ಉಗ್ರವಾಗಿ ಹೋರಾಡುತ್ತ ಉಗ್ರಗಾಮಿಗಳನ್ನು ಸುತ್ತುವರಿಯುವುದನ್ನು ಮುಂದುವರೆಸಿದರು.

ಶತ್ರುಗಳು ಪಾರಮ್ಯ ಸಾಧಿಸುವ ಎಲ್ಲ ಲಕ್ಷಣಗಳಿದ್ದವು. ಆದರೆ ಪರಮೇಶ್ವರನ್ ಎದೆಗುಂದದೇ ನೆಲದಲ್ಲಿ ತೆವಳುತ್ತ ಶತ್ರುಗಳ ಮೇಲೆ ದಾಳಿ ಮುಂದುವರೆಸಿದರು. ಅಷ್ಟರಲ್ಲಿ ಶತ್ರುಗಳ ಮೆಷಿನ್ ಗನ್ ಗಳ ದಾಳಿ ಭೀಕರವಾಯಿತು. ಪರಮೇಶ್ವರನ್ ಅವರಿಗೆ ಸ್ನೈಪರ್ ಗುಂಡುತಗುಲಿತು. ಪರಿಣಾಮ‌ ಅವರ ಎಡಗೈ ಮಣಿಕಟ್ಟು ಛಿದ್ರಬಾಯಿತು. ಆದರೂ ಎದ್ದು ವೀರಾವೇಶದಿಂದ ಹೋರಾಡಿದ ಪರಮೇಶ್ವರನ್ ಎದುರುನಲ್ಲಿದ್ದ ಶತ್ರುವಿನತ್ತ ಮುನ್ನುಗ್ಗಿ ಅವನನ್ನು ನೆಲಕ್ಕೆ ಕೆಡವಿ ನರಕಕ್ಕೆ ಅಟ್ಟಿದರು. ಅಷ್ಟರಲ್ಲಾಗಲೇ ಅವರ ಎದೆಭಾಗಕ್ಕೂ‌ ಗುಂಡುತಗುಲಿತು.‌ ಆದರೂ ಪರಮೇಶ್ವರನ್ ಹೋರಾಡುತ್ತಲೇ ಇದ್ದರು.‌ ಅವರ ಈ ಅಪ್ರತಿಮ‌ ಹೋರಾಟ ಅವರ ಸಹ ಸೈನಿಕರಿಗೆ ಸ್ಫೂರ್ತಿ ತುಂಬಿತು. ಉಗ್ರಗಾಮಿಗಳನ್ನು ಹತ್ತಿಕ್ಕುತ್ತ ಹೋರಾಡಿದ ಪರಮೇಶ್ವರನ್‌ ತಮಗಾದ ಗಂಭೀರಗಾಯಗಳಿಂದ ಇಹಲೋಕ ತ್ಯಜಿಸಿದರು.

ಅವರು ತೋರಿದ ಈ ಅಪ್ರತಿಮ ಹೋರಾಟಕ್ಕೆ ಅವರಿಗೆ ದೇಶದ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮವೀರ ಚಕ್ರʼವನ್ನು ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!