ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಯುವಜನರ ಪಾತ್ರ ಮುಖ್ಯ: ಕೆ.ಜಿ.ಬೋಪಯ್ಯ

ಹೊಸ ದಿಗಂತ ವರದಿ ,ಮಡಿಕೇರಿ:

ಪ್ರತಿಯೊಬ್ಬರೂ ಆರೋಗ್ಯದಿಂದ ಇದ್ದರೆ ದಿನನಿತ್ಯದ ಕೆಲಸ-ಕಾರ್ಯಗಳನ್ನು ಕ್ರಿಯಾಶೀಲತೆಯಿಂದ ನಿರ್ವಹಿಸಬಹುದು. ಆ ನಿಟ್ಟಿನಲ್ಲಿ ಸೈಕಲ್ ಜಾಥಾ ಪೂರಕವಾಗಲಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಮಡಿಕೇರಿ ಕಾವೇರಿ ಕಲಾವೃಂದದ ಸಂಯುಕ್ತಾಶ್ರಯದಲ್ಲಿ ಆಜಾದಿ ಕ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ‘ವಿಶ್ವ ಬೈಸಿಕಲ್ ದಿನಾಚರಣೆ’ ಅಂಗವಾಗಿ ಏರ್ಪಡಿಸಲಾಗಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯ ದೊರೆತು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ಸ್ವಾತಂತ್ರ್ಯ ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಮಹಾನ್ ವ್ಯಕ್ತಿಗಳ ತ್ಯಾಗ-ಬಲಿದಾನಗಳ ಪ್ರತೀಕವಾಗಿ ಆಜಾದಿ ಕ ಅಮೃತ ಮಹೋತ್ಸವ ಸವಿನೆನಪಿಗಾಗಿ ಸರ್ಕಾರದಿಂದ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರ ಬಲಪಡಿಸುವುದು ಯುವ ಜನರ ಕೈಯಲ್ಲಿದೆ ಎಂದು ಬೋಪಯ್ಯ ಅವರು ಹೇಳಿದರು.
ಪಶ್ಚಿಮ ಘಟ್ಟಗಳ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ ಅವರು ಮಾತನಾಡಿ, ಪರಿಸರಕ್ಕೆ ಪೂರಕವಾದ ವ್ಯವಸ್ಥೆಗೆ ವಿಶ್ವದಲ್ಲೆಡೆ ಕೈಜೋಡಿಸುವ ಕೆಲಸ ಆಗಿದೆ. ಆ ನಿಟ್ಟಿನಲ್ಲಿ ಸೈಕಲ್ ಜಾಥವೂ ಪೂರಕವಾಗಿದೆ ಎಂದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ, ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಆಚರಿಸುವ ಈ ಸಂದರ್ಭದಲ್ಲಿ ಎಲ್ಲರೂ ಕೂಡ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಆಜಾದಿ ಕ ಅಮೃತ ಮಹೋತ್ಸವ ಸವಿನೆನಪಿಗಾಗಿ ನಗರದಲ್ಲಿ 7.5 ಕಿಲೋಮೀಟರ್ ಸೈಕ್ಲಿಂಗ್ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿದೆ ಎಂದರು.
ನಗರಸಭೆ ಸಹಯೋಗದೊಂದಿಗೆ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಸೈಕ್ಲಿಂಗ್ ಮೂಲಕ ಆಗಿದೆ. ಮಕ್ಕಳೆಲ್ಲರೂ ಕೂಡಾ ಉತ್ಸಾಹದಿಂದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಕೂಡ ಸೈಕ್ಲಿಂಗ್ ಮಾಡಬೇಕು. ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಸಹಾಯಕವಾಗಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಮಾತನಾಡಿದರು.
ಸೈಕ್ಲಿಂಗ್ ಒಂದು ಆರೋಗ್ಯಕರ ಮತ್ತು ಕ್ರೀಡಾ ಚಟುವಟಿಕೆಯಾಗಿದ್ದು, ಸೈಕ್ಲಿಂಗ್‍ನಲ್ಲಿ ಎಲ್ಲರೂ ತೊಡಗುವಂತಾಗಬೇಕು. ಕ್ರೀಡೆ ಒಂದು ಆರೋಗ್ಯಕರ ಚಟುವಟಿಕೆಯಾಗಿದ್ದು ಯುವಜನರು ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಸಲಹೆ ಮಾಡಿದರು.
ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ  ಮಾತನಾಡಿದರು.
ಸೈಕಲ್ ಜಾಥಾ ನಗರದ ಕೋಟೆ ಆವರಣದಿಂದ ಆರಂಭಗೊಂಡು ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಚೌಕಿ, ಕಾಲೇಜು ರಸ್ತೆ, ಖಾಸಗಿ ಬಸ್ ನಿಲ್ದಾಣ, ರಾಜಸೀಟು ರಸ್ತೆ, ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಮೂಲಕ ಕೋಟೆ ಆವರಣಕ್ಕೆ ತಲುಪಿತು.
ಸೈಕಲ್ ಜಾಥಾದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಪೌರಾಯುಕ್ತ ಎಸ್.ವಿ.ರಾಮದಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ ಮತ್ತಿತರರು ಇದ್ದರು. ಇಂದುಮತಿ ಪ್ರಾರ್ಥಿಸಿದರೆ ಸುಕುಮಾರ್ ಅವರು ಸ್ವಾಗತಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!