ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಗ್ಗಿ ಹೇಳೋದಕ್ಕೆ ಬರುತ್ತಿಲ್ಲ ಎನ್ನುವ ಕಾರಣಕ್ಕೆ ಮದುವೆ ಕ್ಯಾನ್ಸಲ್ ಆದ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದ ಯುವಕನಿಗೆ ಇನ್ನೊಂದು ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮದುವೆ ದಿನದಂದು ಯುವತಿ ಮತ್ತು ಯುವಕನ ಕುಟುಂಬ ಮದುವೆ ಮಂಟಪಕ್ಕೆ ಬಂದು ತಲುಪಿದೆ. ಇನ್ನೇನು ಮದುವೆಯಾಗಿ ಬಿಡುತ್ತದೆ ಎನ್ನುವಷ್ಟರಲ್ಲಿ ವಧು, ವರನಿಗೆ ಒಂದು ಸವಾಲು ಹಾಕಿದ್ದಾಳೆ. 2ರ ಮಗ್ಗಿ ಹೇಳಿ, ನನ್ನ ಕೊರಳಿಗೆ ಹಾರ ಹಾಕು ಎಂದಿದ್ದಾಳೆ.
2ರ ಮಗ್ಗಿ ಹೇಳಲು ವರ ವಿಫಲನಾಗಿದ್ದಾನೆ. ತಕ್ಷಣ ವಧು ಮದುವೆ ಮಂಟಪದಿಂದ ಎದ್ದು ಹೊರನಡೆದಿದ್ದಾಳೆ. ಯಾರು ಏನೇ ಹೇಳಿದರೂ ಕೇಳದೆ ಮದುವೆ ಮುರಿದುಕೊಂಡಿದ್ದಾಳೆ.
ಯುವತಿಯ ಬಳಿ ವರನ ಕುಟುಂಬ ಆತ ವಿದ್ಯಾವಂತನೆಂದು ಸುಳ್ಳು ಹೇಳಿತ್ತಂತೆ. ಈ ವಿಚಾರವಾಗಿ ಅನುಮಾನ ಬಂದ ಹಿನ್ನೆಲೆಯಲ್ಲಿ ಯುವತಿ ಈ ರೀತಿ ಮಾಡಿ ನಿಜಾಂಶ ಹೊರತೆಗೆದಿದ್ದಾಳೆ.