ಹೊಸದಿಗಂತ ವರದಿ,ಮಡಿಕೇರಿ:
ಪೊನ್ನಂಪೇಟೆ ಸಮೀಪದ ಕೆ.ಬಾಡಗ ಗ್ರಾಮದ ನಾಣಚ್ಚಿಯಲ್ಲಿ 9 ಮೇಕೆಗಳನ್ನು ಸಾಯಿಸಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಕೆ. ಬಾಡಗ ಗ್ರಾಮದ ನಾಣಚ್ಚಿಯ ಕೋದಮೂಲೆ ಕಾಲೋನಿಯ ನಿವಾಸಿಗಳು ಬುಧವಾರ ತಮ್ಮ ಹಸು ಮತ್ತು ಆಡುಗಳನ್ನು ಮೇಯಲು ಬಿಟ್ಟಿದ್ದರು. 11ಗಂಟೆ ಸುಮಾರಿಗೆ ಹಠಾತ್ತನೆ ದಾಳಿ ಮಾಡಿದ ಹುಲಿಯೊಂದು 9 ಆಡುಗಳನ್ನು ಕೊಂದು ಹಾಕಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಗ್ರಾಮಸ್ಥರು ಅದರ ಚಲನವಲನವನ್ನು ಪರಿಶೀಲಿಸಿದ್ದಾರೆ. ಆ ಹುಲಿಯನ್ನು ಓಡಿಸಬಾರದು, ಸೆರೆಹಿಡಿಯಬೇಕೆಂದು ರಾತ್ರೋರಾತ್ರಿ ಪ್ರತಿಭಟನೆಗೂ ಇಳಿದ್ದಿದ್ದರು.
ಹುಲಿಯು ಆ ಸ್ಥಳದಲ್ಲೇ ಬೀಡುಬಿಟ್ಟಿರುವುದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಕೂಡಲೇ ಸ್ಥಳಕ್ಕೆ ಬಂದು ರಕ್ಷಣೆ ನೀಡುವುದರೊಂದಿಗೆ ನ್ಯಾಯ ಒದಗಿಸಿಕೊಡಬೇಕೆಂದೂ ಅಗ್ರಹಿಸಿದ್ದರು.
ಮಹಿಳೆಯಾಗಿದ್ದರೂ, ಕೆ.ಬಾಡಗ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ರಾತ್ರೊರಾತ್ರಿ ಕೊಡಂಗೆ ಹಾಡಿಗೆ ತೆರಳಿ ಅಧ್ಯಕ್ಷರನ್ನು ಕರೆದುಕೊಂಡು ಬಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಾವೇರಮ್ಮ ಅವರ ಮೂಲಕ ಕರೆದುಕೊಂಡು ಅರಣ್ಯ ಇಲಾಖೆಯವರನ್ನು ಸಂಪರ್ಕಿಸಿ ರಾತ್ರಿಗೆ ಬಂದೋಬಸ್ತು ಮಾಡಿಸಿದರು.
ಗುರುವಾರ ಅಲ್ಲಿನ ನಿವಾಸಿಗಳು ಯಾರೂ ಕೆಲಸಕ್ಕೆ ಹೋಗದೆ ಸ್ಥಳೀಯ ಜನಪ್ರತಿನಿಧಿಗಳ, ಗ್ರಾಮಸ್ಥರ ಸಮ್ಮುಖದಲ್ಲಿ ಹುಲಿಯನ್ನು ಸೆರೆಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ತಿತಿಮತಿಯ ಮತ್ತಿಗೋಡು ಶಿಬಿರದಿಂದ ಎರಡು ಆನೆಗಳನ್ನು ಹಾಗೂ ಪಂಜರವನ್ನು ತರಿಸಿ ಕಾರ್ಯಾಚರಣೆ ಆರಂಭಿಸಿ ಕೊನೆಗೂ ಹುಲಿರಾಯನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಅತ್ತ ಹುಲಿಯನ್ನು ಸೆರೆ ಹಿಡಿಯುವವರೆಗೂ ಪ್ರತಿಭಟನೆ ಮುಂದುವರಿದಿತ್ತು.