ಮಹಿಳೆಯ ತೀರ್ಮಾನ ಅಂತಿಮ: 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಅನುಮತಿ ಕೊಟ್ಟ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಹೈಕೋರ್ಟ್ 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಅನುಮತಿ ನೀಡಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಎಂ. ಸಿಂಗ್, ತಾಯಿಯ ಆಯ್ಕೆಯೇ ಅಂತಿಮವಾಗಿದ್ದು, ಅದರ ಆಧಾರದ ಮೇಲೆ ಅನುಮತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

26 ವರ್ಷದ ಮಹಿಳೆಯೊಬ್ಬರು ತಮ್ಮ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಸಿಂಗ್, ಎನ್‌ಎನ್‌ಜೆಪಿ ಆಸ್ಪತ್ರೆ ವೈದ್ಯರ ಸಲಹೆ ಕೇಳಿದ್ದರು. ಆದರೆ ವರದಿಯಲ್ಲಿ ವೈದ್ಯರು ಗರ್ಭಪಾತವನ್ನು ತಿರಸ್ಕರಿಸಿದ್ದರು.

ಬಳಿಕ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಮತ್ತು ಸ್ತ್ರೀರೋಗತಜ್ಞರಿಂದ ವರದಿ ಕೇಳಿದರು. ನರಶಸ್ತ್ರಚಿಕಿತ್ಸಕರು ಮಗುವಿಗೆ ಏನಾದರೂ ನ್ಯೂನತೆ ಇರುವ ಸಾಧ್ಯತೆಯಿದೆ, ಮಗುವಿನ `ಜೀವನದ ಗುಣಮಟ್ಟ’ವನ್ನು ಊಹಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದರು. ಆದರೆ ಮಗುವಿನ ಜನನದ ಬಳಿಕ ಸುಮಾರು 10 ವಾರಗಳ ನಂತರ ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ತಿಳಿಸಿದ್ದರು.

ವರದಿ ಆಧರಿಸಿ ತೀರ್ಪು ನೀಡಿದ ನ್ಯಾ. ಪ್ರತಿಭಾ ಸಿಂಗ್, ಭಾರತದ ಕಾನೂನಿನಲ್ಲಿ ಮಹಿಳೆ ತಾನು ಗರ್ಭಾವಸ್ಥೆಯಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದು ಅಂತಿಮವಾಗಿ ಅವರೇ ನಿರ್ಧರಿಸಬೇಕು. ಈ ರೀತಿಯ ಪ್ರಕರಣಗಳಲ್ಲಿ ಮಹಿಳೆಯ ತೀವ್ರ ಸಂದಿಗ್ಧತೆಯನ್ನು ಎತ್ತಿ ತೋರಿಸುತ್ತವೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಗರ್ಭಪಾತ ಮಾಡಬಹುದು ಎಂದು ಆದೇಶಿಸಿದರು.

ಅರ್ಜಿದಾರ ಮಹಿಳೆ ಎನ್‌ಎನ್‌ಜೆಪಿ ಅಥವಾ ಇತರೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಬಹುದು ಎಂದು ತಿಳಿಸಿದರು. ವೈದ್ಯರು ಅಗತ್ಯ ನೆರವು ನೀಡುವಂತೆ ನಿರ್ದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!