Thursday, June 30, 2022

Latest Posts

ಕಾರ್ಮಿಕರಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು: ಸಿಎಂ ಬೊಮ್ಮಾಯಿ

ದಿಗಂತ ವರದಿ ಹುಬ್ಬಳ್ಳಿ :

ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಭವನ ನಿರ್ಮಿಸಿ, ಕಾರ್ಮಿಕರಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲಾಗಿರುವ ಕಾರ್ಮಿಕ ಭವನ ಕಟ್ಟಡವನ್ನು ಉದ್ಘಾಟಿಸಿ, ಸಂಚಾರಿ‌ ಚಿಕಿತ್ಸಾ ಘಟಕ, ಶ್ರಮಿಕ್ ಸಂಜೀವಿನಿಗೆ ಚಾಲನೆ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ರಾಜ್ಯದ ಎಂಟು ಜಿಲ್ಲೆ ಹಾಗೂ ಹುಬ್ಬಳ್ಳಿಯಲ್ಲಿ ಕಾರ್ಮಿಕ ಭವನ ನಿರ್ಮಿಸಲಾಗಿದೆ. ಸುಸಜ್ಜಿತ ಕಟ್ಟಡದಲ್ಲಿ ಕಾರ್ಮಿಕ ಇಲಾಖೆ ಕಚೇರಿ, ಸಂಬಂಧಿಸಿದ ಇತರೆ ಕಚೇರಿಗಳು, ಕಾರ್ಮಿಕ ನ್ಯಾಯಾಲಯ ಸ್ಥಾಪಿಸಿ, ಒಂದೇ ಸೂರಿನಡಿ ಕಾರ್ಮಿಕರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಬಾಕಿ ಇರುವ ಜಿಲ್ಲೆಗಳಲ್ಲಿಯೂ ಕಾರ್ಮಿಕ ಭವನ ನಿರ್ಮಿಸಲಾಗುವುದು. ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡಿ ಎಲ್ಲಾ ರೀತಿಯ ಸವಲತ್ತು ಹಾಗೂ ನೆರವುಗಳನ್ನು ಕಾರ್ಮಿಕ ಇಲಾಖೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಶ್ರಮಿಕ್ ಸಂಜೀವಿನಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರೂಪಿಸಿರುವ ಸಂಚಾರಿ ಆರೋಗ್ಯ ಕ್ಲಿನಿಕ್- ಶ್ರಮಿಕ್ ಸಂಜೀವಿನಿಯ 3 ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿಗಳು, ಸುಸಜ್ಜಿತ ಹಾಗೂ ಆಧುನಿಕ ವೈದ್ಯಕೀಯ ಪರಿಕರಗಳನ್ನು ಆಂಬ್ಯುಲೆನ್ಸ್‌ನಲ್ಲಿ ಅಳವಡಿಸಲಾಗಿದೆ. ಪ್ರಥಮ ಚಿಕಿತ್ಸಾ ಸೇವೆಗಳು, ರಕ್ತ ಹಾಗೂ ಮೂತ್ರ ಪರೀಕ್ಷೆ ಪ್ರಯೋಗಾಲ, ಜೀವನಾವಶ್ಯಕ ಔಷಧಗಳು, ಬಿ.ಪಿ.ಆಪರೇಟರ್, ಇ.ಸಿ.ಜಿ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯಗಳು ಸಂಚಾರಿ ಆರೋಗ್ಯ ಕ್ಲಿನಿಕ್ ಲಭ್ಯ ಇವೆ. ಮುಂದಿನ ಆಯವ್ಯಯದಲ್ಲಿ ಶ್ರಮಿಕ್ ಸಂಜೀವಿನಿ ಸಂಚಾರಿ ಕ್ಲೀನಿಕ್‌ಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸುವುದಾಗಿ ಭರವಸೆ ನೀಡಿದರು.

ನೂತನ ಕಾರ್ಮಿಕ ಭವನ ವಿಶೇಷತೆ: ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 21 ಗುಂಟೆ ಜಾಗೆಯಲ್ಲಿ 7.5 ಕೋಟಿ ವೆಚ್ಚದಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಲಾಗಿದೆ. ಕಾರ್ಮಿಕ ಭವನವು 03 ಮಹಡಿಗಳನ್ನೊಳಗೊಂಡಿದೆ. ತಲಾ 370 ಚ.ಮೀ ಗಳಲ್ಲಿ ನಿರ್ಮಾಣಗೊಂಡ ಪ್ರತಿ ಮಹಡಿಗಳು ಕಛೇರಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅನುಕೂಲಕರವಾಗಿವೆ. ಲಿಫ್ಟ್ , ರ್ಯಾಂಪ್ , ಕುಡಿಯುವ ನೀರು , ಶೌಚಾಲಯ ಹಾಗೂ ಇನ್ನಿತರೆ ಅಗತ್ಯ ಎಲ್ಲ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ. ಅಗ್ನಿ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ.‌

ಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸಂಘ, ಕಾರ್ಮಿಕ ಉಪವಿಭಾಗಧಿಕಾರಿಗಳು ಕಾರ್ಮಿಕ ನಿರೀಕ್ಷಕರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿಗಳು ಕಾರ್ಮಿಕ ಭವನದಲ್ಲಿ ಕಾರ್ಯಾರಂಭ ಮಾಡಲಿವೆ. ಕಾರ್ಖಾನೆಗಳು, ಬಾಯ್ಲರ್ಸ್, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಕಚೇರಿಗಳು ಸಹ ಮಂದಿನ ದಿನಮಾನಗಳಲ್ಲಿ ಕಾರ್ಮಿಕ ಭವನದಲ್ಲಿ ಕಾರ್ಯನಿರ್ವಹಿಸಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss