ಒಂದು ಸಾರಿ ಕಾಂಗ್ರೆಸ್ ಬಿಟ್ಟು ಬಂದ ಮೇಲೆ ಮತ್ತೆ ಮರಳಿ ಹೋಗುವ ಮಾತೆ ಇಲ್ಲ: ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿ, ಗದಗ:

ಸೊಸೆಯಾಗಿ ಬಂದು ಮೊಳೆ ಹೊಡೆದು ಮನೆ ಮಗಳಾಗಿದ್ದೇವೆ. ನಾವು ಏಕೆ ಪಕ್ಷಬಿಟ್ಟು ಹೋಗೋಣ ಒಂದು ಸಾರಿ ಕಾಂಗ್ರೆಸ್ ಬಿಟ್ಟು ಬಂದ ಮೇಲೆ ಮತ್ತೆ ಮರಳಿ ಪಕ್ಷಕ್ಕೆ ಹೋಗುವ ಮಾತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯ ೧೭ ಶಾಸಕರು ಮರಳಿ ಕಾಂಗ್ರೆಸ್‌ಗೆ ಹೋಗುವ ಆರೋಪಕ್ಕೆ ಉತ್ತರಿಸಿದ ಅವರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನವರೇ ಬಹಳ ಜನ ಬಿಜೆಪಿಗೆ ಬರಲಿದ್ದಾರೆ. ಕಾಂಗ್ರೆಸ್‌ನವರಿಗೆ ಯಾಕೆ ಬಿಜೆಪಿಯವರ ಮೇಲೆ ಅಷ್ಟೊಂದು ಮಮಕಾರ ಗೊತ್ತಿಲ್ಲ, ಬಾರಿ ಸ್ಟ್ರಾಂಗ್ ಇದ್ದೇವೆ ನಾವೇ ಅಧಿಕಾರಕ್ಕೆ ಬರುತ್ತವೆ ಎಂದು ಹೇಳುವ ಕಾಂಗ್ರೆಸ್ ನಾಯಕರು ಅಲ್ಲಿದ್ದವರಿಗೆ ಟಿಕೇಟ್ ಕೊಡಬಹುದಿತ್ತಲ್ವಾ ಇನ್ನೊಂದು ಪಕ್ಷದಿಂದ ಬರುತ್ತಾರೆ ಎಂದು ನಿರೀಕ್ಷೆಯಲ್ಲಿದ್ದಾರೆ ಎಂದರೆ ಕಾಂಗ್ರೆಸ್ ಪಕ್ಷ ಸಂಪೂರ್ಣ ನಶಿಸಿ ಹೋಗಿದೆ. ಅವರ ತಳಪಾಯ ಕುಸಿದು ಹೋಗಿದೆ
ಹೀಗಾಗಿ ಬೇರೆ ಯಾರಾದರೂ ಬರುತ್ತಾರೆ ಎಂದು ದಾರಿ ಕಾಯುತ್ತಿದ್ದಾರೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಅವರು ಐದು ಬೆರಳುಗಳೂ ಸಮ ಇರಲ್ಲ, ನಾಲ್ಕು ಸ್ಥಾನಗಳು ಖಾಲಿ ಇವೆ. ಅಧಿಕಾರ ಪಡೆಯಬೇಕೆಂದು ಎಲ್ಲರಿಗೂ ಆಸೆ ಇರುತ್ತದೆ. ಪುನರ್‌ರಚನೆ ಅಥವಾ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ಅವರ ಕೈಯಲ್ಲಿದೆ ಎಂದು ಹೇಳಿದ ಅವರು ಸಿಎಂ ಬದಲಾವಣೆ ಸಾಧ್ಯವೇ ಇಲ್ಲ ಸತ್ಯಕ್ಕೆ ದೂರವಾದ ಮಾತು ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್ ಹಾಗೂ ಪ್ರಲ್ಹಾದ್ ಜೋಷಿಯವರೇ ಈ ಬಗ್ಗೆ ಹೇಳಿದ್ದು, ೨೦೨೩ ರವರೆಗೂ ಬಸವರಾಜ ಬೊಮ್ಮಾಯಿವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ಆರು ತಿಂಗಳ ಅವಧಿ ಮುಗಿದ ಮೇಲೆ ಸಿಎಂ ಬದಲಾವಣೆ ಆಗುತ್ತಾರೆ ಎನ್ನುವ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಸಿದ ಸಚಿವರು ಆರು ತಿಂಗಳವರೆಗೆ ಮಾತ್ರ ಮುಖ್ಯಮಂತ್ರಿ ಎಂದು ಅವರಿಗೆ ಯಾರಾದರೂ ಬರೆದುಕೊಟ್ಟಿದ್ದಾರೆಯೇ ಕಾಂಗ್ರೆಸ್‌ನವರಲ್ಲಿಯೇ ಅನುಮಾನವಿದೆ
ಅವರ ಕಾಲ ಕೆಳಗೆ ಹಳ್ಳ, ಹೊಳೆಗಳು ಹರಿಯುತ್ತಿವೆ. ಅವರೇ ಎಲ್ಲಿಲ್ಲಿ ಜಾರಿಕೊಂಡು ಯಾವಾಗ ಬೀಳುತ್ತಾರೆ ಎಂದು ಗೊತ್ತಿಲ್ಲ ಡಿಕೆಶಿ ಹಾಗೂ ಸಿದ್ಧರಾಮಯ್ಯ ಕಚ್ಚಾಟದಲ್ಲಿ ದೇಶದಲ್ಲೇ ಕಾಂಗ್ರೆಸ್ ಪಕ್ಷ ಮುಗಿದುಹೋಗಿದೆ, ಆದಷ್ಟು ಬೇಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪತನವಾಗುತ್ತದೆ ಎಂದು ಭವಿಷ್ಯ ನುಡಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ದಿನಗಳ ಜನತಾ ದರ್ಶನ ಹಮ್ಮಿಕೊಳ್ಳಲಾಗುವುದು. ಕೃಷಿ ಇಲಾಖೆಯಲ್ಲಿ ಶೇ. ೫೬ ರಷ್ಟು
ವಿವಿದ ಹಂತದ ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವರು
ಬೆಳೆವಿಮಾ ಯೋಜನೆ ದುರ್ಬಳಕೆಯಾಗುತ್ತಿರುವ ಬಗ್ಗೆ ರಾಜ್ಯದಲ್ಲೇ ಮೊದಲ ಪ್ರಕರಣ ಗದಗಿನಲ್ಲಿ ಬೆಳಕಿಗೆ ಬಂದಿದೆ. ಸಂಬಂಧಿಸಿದವರ ವಿರುದ್ಧ ಈಗಾಗಲೇ ಇಲಾಖೆಯಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಜೊತೆಗೆ ಈ ರೀತಿಯ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಎಲ್ಲ ವಿಮಾ ಕಂಪನಿಗಳ ಅಧಿಕಾರಿಗಳ ಸಭೆ ನಡೆಸಿ, ಚರ್ಚೆ ನಡೆಸಲಾಗುವುದು. ಮಹಿಕೋ ಬಿಟಿ ಹತ್ತಿ ಕಳಪೆ ಬಿತ್ತನೆ ಬೀಜ ವಿತರಣೆ ಬಗ್ಗೆಯೂ ದೂರುಗಳು ಬಂದಿದ್ದರಿಂದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!