ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ, ಅನುದಾನದ ದುರ್ಬಳಕೆಯಾಗಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂದಾಜು ವೆಚ್ಚಕ್ಕಿಂತ ಕಡಿಮೆ ಹಣದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ ಎಂದರು.
ದ್ವಾರಕಾ ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಪ್ರತಿ ಕಿಲೋಮೀಟರ್‌ಗೆ 250 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದ ಅನುದಾನದ ದುರ್ಬಳಕೆಯಾಗಿದೆ ಎಂದು ಆಡಿಟ್ ವರದಿ ನೀಡಿದೆ. ಆದರೆ ಅದು ತಪ್ಪು ಮಾಹಿತಿ ಎಂದು ಹೇಳಿದರು.
ದ್ವಾರಕಾ ಎಕ್ಸ್‌ಪ್ರೆಸ್‌ವೇ ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವಂತೆ 29 ಕಿಲೋಮೀಟರ್ ಉದ್ದದ್ದಲ್ಲ. ಸುರಂಗಗಳನ್ನೂ ಒಳಗೊಂಡು ಅದು ಸುಮಾರು 230 ಕಿಲೋಮೀಟರ್‌ಗಳಷ್ಟು ಉದ್ದವಾಗಿದೆ. ಇದರ ಪ್ರಕಾರ ಪ್ರತಿ ಕಿಲೋಮೀಟರ್‌ಗೆ 9.5 ಕೋಟಿ ವ್ಯಯವಾಗುತ್ತಿದೆ. ಈ ಬಗ್ಗೆ ಸಿಎಜಿ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಸ್ಪಷ್ಟೀಕರಣದಿಂದ ಅವರಿಗೆ ಮನವರಿಕೆಯಾಗಿದೆ ಎಂದರು.
ಮುಂಬರುವ ಯೋಜನೆಗಳ ಬಗ್ಗೆ ಮಾತನಾಡಿದ ಗಡ್ಕರಿ, ಕಾಶ್ಮೀರದಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸಲು ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಯೋಜನೆ ಪ್ರಕಟಿಸಿದರು. ಕಾಶ್ಮೀರದಿಂದ ಕನ್ಯಾಕುಮಾರಿಗೆ ಪ್ರವೇಶ ನಿಯಂತ್ರಣ ರಸ್ತೆ ಮೂಲಕ ಸಂಪರ್ಕ ಕಲ್ಪಿಸಲು ಸರ್ಕಾರ ಯೋಜಿಸುತ್ತಿದೆ. ಜೊತೆಗೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.