ಲವ್ ಜಿಹಾದ್ ತಡೆಗೆ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಅಗತ್ಯವಿಲ್ಲ: ಗೃಹ ಸಚಿವ ಅರಗ ಜ್ಞಾನೇಂದ್ರ

ಹೊಸದಿಗಂತ ವರದಿ, ಚಿತ್ರದುರ್ಗ
ನಮ್ಮ ರಾಜ್ಯದಲ್ಲಿ ಲವ್ ಜಿಹಾದ್ ತಡೆಗೆ ಸ್ಪೆಷಲ್ ಟಾಸ್ಕ್‌ ಫೋರ್ಸ್ ರಚನೆಯ ಅಗತ್ಯವಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಲವ್ ಜಿಹಾದ್ ವಿಚಾರದಲ್ಲಿ ಸ್ಪೆಷಲ್ ಟಾಸ್ಕ್‌ ಫೋರ್ಸ್‌ ರಚನೆಗೆ ಹಿಂದೂ ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ. ಲವ್ ಜಿಹಾದ್ ಈಗಾಗಲೇ ಮತಾಂತರ ನಿಷೇಧ ಕಾಯ್ದೆಯಡಿ ಇರುವುದರಿಂದ ಅದರ ಅಗತ್ಯವಿಲ್ಲ. ಮತಾಂತರ ನಿಷೇಧ ತಡೆ ಕಾಯ್ದೆಯಲ್ಲಿ ಲವ್‌ ಜಿಹಾದ್‌ ತಡೆಗೆ ಬೇಕಾದ ಎಲ್ಲವೂ ಕೂಡಾ ಇವೆ. ಸಧ್ಯಕ್ಕೆ ನಮ್ಮ ರಾಜ್ಯದಲ್ಲಿ ಹೊಸ ಕಾಯ್ದೆಯ ಅಗತ್ಯವಿಲ್ಲ ಎಂದರು.
ಮತಾಂತರ ಎಲ್ಲೇ ನಡೆದರೂ ಪೊಲೀಸರು ಕೇಸ್ ದಾಖಲಿಸಬೇಕು. ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಹೋಗಲು ಸಂವಿಧಾನದಲ್ಲಿ ಅವಕಾಶ ಇದೆ. ಆದರೆ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಮತಾಂತರ ನಿಷೇಧ ಮಾಡಿದ್ದೇ ಈ ಉದ್ದೇಶದಿಂದ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತಾಂತರ ಆಗುತ್ತಿದೆ. ಅನೇಕ ಸ್ವಾಮೀಜಿಗಳು ಕೂಡಾ ಈ ಕುರಿತು ಚರ್ಚೆ ಮಾಡಿದ್ದರು. ಯಾರೇ ಮತಾಂತರದಂತ ಕೃತ್ಯದಲ್ಲಿ ತೊಡಗಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಮುಖಂಡರ ಬಸ್ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಬಸ್ ಯಾತ್ರೆ, ತಿರುಪತಿ ಯಾತ್ರೆ ಸೇರಿದಂತೆ ಯಾವ ಯಾತ್ರೆ ಬೇಕಾದರೂ ಮಾಡಲಿ. ಅವರನ್ನ ಸೋಲಿಸಬೇಕು ಎಂದು ರಾಜ್ಯದ ಜನ ನಿರ್ಧಾರ ಮಾಡಿದ್ದಾರೆ. 60 ವರ್ಷದ ಆಡಳಿತ ದೇಶಕ್ಕೆ ಸಾಕು ಎನಿಸಿದೆ, ಯಾವ ಯಾತ್ರೆ ಫಲ ನೀಡಲ್ಲ ಎಂದು ಹೇಳಿದರು.
ದೆಹಲಿ ಪ್ರವಾಸದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಚಾರದಲ್ಲಿ ನಾವು ದೆಹಲಿಗೆ ಹೋಗುತ್ತಿಲ್ಲ. ಗಡಿ ವಿಚಾರವಾಗಿ ಸಭೆ ಕರೆದಿದ್ದಾರೆ. ಹಾಗಾಗಿ ತೆರಳುತ್ತಿದ್ದೇನೆ. ರಾಜ್ಯದ ಗೃಹ ಇಲಾಖೆ ಬಗ್ಗೆ ನನ್ನ ಆಹ್ವಾನಿಸಿದ ಕಾರಣ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!