ಗೃಹಸಚಿವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ

ಹೊಸದಿಗಂತ ವರದಿ,ದಾವಣಗೆರೆ:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅರಗ ಜ್ಞಾನೇಂದ್ರ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗೃಹಸಚಿವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವ ಅರಗ ಜ್ಞಾನೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹುಬ್ಬಳ್ಳಿಯಂತಹ ಘಟನೆಗಳು ನಡೆದಾಗ ತಕ್ಷಣ ಕ್ರಮ ಕೈಗೊಂಡ ಅರಗ ಜ್ಞಾ ನೇಂದ್ರರನ್ನು ಬದಲಿಸುವುದು ಸರಿಯಲ್ಲ. ಈ ಬಗ್ಗೆ ಹೇಳಿಕೆ ನೀಡುತ್ತಿರುವ ಕೆಲವರದ್ದು ವೈಯಕ್ತಿಕ ಅಭಿಪ್ರಾಯವಷ್ಟೇ ಎಂದರು.
ಹುಬ್ಬಳ್ಳಿಯಲ್ಲಿ ಘಟನೆ ನಡೆದ ಒಂದು ಗಂಟೆಯಲ್ಲೇ ಸ್ಟೇಟಸ್ ಹಾಕಿದ್ದ ಹಿಂದು ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆನಂತರವೂ ಸುಮಾರು ಒಂದೂವರೆ ಸಾವಿರ ಜನರು ಗುಂಪು ಕಟ್ಟಿಕೊಂಡು ಬಂದು ಕಲ್ಲು ತೂರಾಟ ನಡೆಸಿದ್ದಾರೆ. ತಪ್ಪು ಮಾಡಿದ್ದವರನ್ನು ಬಂಧಿಸಿದ ಮೇಲೂ ಮುಸ್ಲಿಂ ಬಾಂಧವರ ಪೈಕಿ ಕೆಲವರು ಕಲ್ಲು ತೂರಾಟ ಮಾಡಿ, ಪೊಲೀಸರು, ಸಾರ್ವಜನಿಕರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಆದರೂ ಕಾಂಗ್ರೆಸ್ನ ನಾಯಕರು ಅಮಾಯಕರನ್ನು ಬಂಧಿಸಬೇಡಿ ಎನ್ನುವ ಮೂಲಕ ಗಲಭೆಕೋರರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮುಸ್ಲಿಂ ನಾಯಕ ಅಲ್ತಾಫ್ ಹಳ್ಳೂರು ಘಟನೆಗೆ ಕಾರಣವೆಂಬುದು ಜಗಜ್ಜಾಹೀರಾಗಿದೆ. ಆದರೂ ಕಾಂಗ್ರೆಸ್ ಮುಖಂಡರು ಅಮಾಯಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹುಬ್ಬಳ್ಳಿಗೆ ಹೋಗಿ ವಾಸ್ತವತೆ ತಿಳಿಯಬೇಕು. ಆನಂತರವೇ ವಿಪಕ್ಷ ನಾಯಕರು ಮಾತನಾಡಬೇಕು. ಗಲಭೆ ಮಾಡಿದವರು, ಕಲ್ಲು ತೂರಾಟ, ವಾಹನ ಜಖಂ ಮಾಡಿದವರು, ಜನರು ಹಾಗೂ ಪೊಲೀಸರ ಮೇಲೆ ದಾಳಿ ಮಾಡಿದವರನ್ನು ಪ್ರೋತ್ಸಾಹಿಸುವುದು ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ ಎಂದು ಅವರು ಆಕ್ಷೇಪಿಸಿದರು.
ರಾಜ್ಯದಲ್ಲಿ ಅಲ್ಲಲ್ಲಿ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಿದೆ. ಮೊದಲು ರಾಜ್ಯದಲ್ಲಿ ಸಾಮರಸ್ಯ ಇತ್ತು, ಈಗಲೂ ಇದೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿಯೇ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆದಷ್ಟು ಬೇಗ ಆರೋಪಮುಕ್ತರಾಗಿ ಬರುತ್ತಾರೆ. ಈಶ್ವರಪ್ಪನವರು ಯಾವುದೇ ತಪ್ಪು ಮಾಡಿಲ್ಲವೆಂಬ ನಂಬಿಕೆ ನನಗಿದೆ. ಶೀಘ್ರವೇ ಈಶ್ವರಪ್ಪ ಆರೋಪಮುಕ್ತರಾಗಿ ಮತ್ತೆ ಸಚಿವರಾಗಲಿದ್ದಾರೆ. ತನಿಖೆ ನಂತರ ಸತ್ಯಾಂಶ ಹೊರ ಬರಲಿದೆ ಎಂದು ಅವರು ತಿಳಿಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು 150 ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು, ಕಾಂಗ್ರೆಸ್ಸನ್ನು ಧೂಳೀಪಟ ಮಾಡಲಿದ್ದೇವೆ. ಬಿಜೆಪಿಯ ಎಲ್ಲಾ ನಾಯಕರೂ ರಾಜ್ಯ ಪ್ರವಾಸ ಕೈಗೊಂಡು ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇವೆ. ಇನ್ನು 4-5 ದಿನಗಳಲ್ಲೇ ನಮ್ಮೆಲ್ಲರ ಪ್ರವಾಸ ಶುರುವಾಗಲಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದ್ದು, ಕರ್ನಾಟಕದಲ್ಲಿ ಮಾತ್ರ ಒಂದಿಷ್ಟು ಉಸಿರಾಡುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಬಿ.ಎ.ಬಸವರಾಜ ಭೈರತಿ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ, ಎಸ್.ವಿ.ರಾಮಚಂದ್ರ, ಮಾಡಾಳ್ ವಿರುಪಾಕ್ಷಪ್ಪ, ವಿಧಾನ ಪರಿಷತ್ ಸದಸ್ಯ ರವಿಕುಮಾರ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!