ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಅದ್ದೂರಿಯಾಗಿ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಐಪಿಎಲ್ನ ಒಂದು ಪಂದ್ಯದ ಬಗ್ಗೆ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಅದೇನೆಂದರೆ ಏಪ್ರಿಲ್ 6 ರಂದು ರಾಮ ನವಮಿಯಂದು ಲಕ್ನೋ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ನಡೆಯುವುದಿಲ್ಲ ಎಂದು ಹೇಳಲಾಗಿದೆ.
ಬಿಸಿಸಿಐ ವೇಳಾಪಟ್ಟಿ ಪ್ರಕಾರ ಏಪ್ರಿಲ್ 6 ಭಾನುವಾರ ರಾಮ ನವಮಿಯಂದು ಎರಡು ಪಂದ್ಯಗಳು ನಡೆಯಬೇಕಿತ್ತು. ಆದರೆ ಅಂದು ಕೇವಲ ಒಂದು ಪಂದ್ಯ ನಡೆಸುವುದಾಗಿ ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಅಂದು ಮಧ್ಯಾಹ್ನ ಕೋಲ್ಕತ್ತಾದಲ್ಲಿ 3:30ಕ್ಕೆ ನಡೆಯಬೇಕಿದ್ದ ಲಕ್ನೋ ಹಾಗೂ ಕೆಕೆಆರ್ ನಡುವಿನ ಪಂದ್ಯವನ್ನು ಮುಂದಕ್ಕೆ ಹಾಕಲಾಗಿದೆ. ಅದರಂತೆ ಸಂಜೆ 7:30ಕ್ಕೆ ಹೈದರಾಬಾದ್ನಲ್ಲಿ ನಡೆಯುವ ಗುಜರಾತ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯ ನಿಗದಿಯಂತೆ ನಡೆಯುತ್ತದೆ.
ಭದ್ರತೆ ಕಾರಣದಿಂದ ಲಕ್ನೋ ಹಾಗೂ ಕೆಕೆಆರ್ ನಡುವಿನ ಪಂದ್ಯವನ್ನ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ. ಬಂಗಾಳದಲ್ಲಿ ಏಪ್ರಿಲ್ 6 ರಂದು ಶ್ರೀರಾಮನವಮಿ ಹಬ್ಬ ಜೋರಾಗಿ ನಡೆಯುತ್ತದೆ. ಈ ವೇಳೆ ಪೊಲೀಸರಿಗೆ ಹೆಚ್ಚಿನ ಕೆಲಸ ಇರುತ್ತದೆ. ಕೋಲ್ಕತ್ತಾದ ಎಲ್ಲ ಕಡೆಯೂ ಪೊಲೀಸರು ಭದ್ರತೆಯಲ್ಲಿ ತೊಡಗಲಿದ್ದಾರೆ. ಇದರಿಂದ ಐಪಿಎಲ್ ಪಂದ್ಯಕ್ಕೆ ಭದ್ರತೆ ಕೊರತೆ ಆಗಬಹುದು. ಹೀಗಾಗಿ ಪಂದ್ಯ ಮುಂದೂಡುವಂತೆ ಪೊಲೀಸರು ಕ್ರಿಕೆಟ್ ಅಸೋಷಿಯೇಷನ್ ಆಫ್ ಬೆಂಗಾಲ್ (ಸಿಎಬಿ)ಗೆ ಮನವಿ ಮಾಡಿದ್ದರು.
ಇದನ್ನು ಪರಿಗಣಿಸಿರುವ ಬಿಸಿಸಿಐ ಪಂದ್ಯವನ್ನು ಮುಂದಕ್ಕೆ ಹಾಕಿದ್ದು ಏಪ್ರಿಲ್ 8 ಮಂಗಳವಾರದಂದು ಎರಡು ಪಂದ್ಯಗಳು ನಡೆಯಲಿವೆ.