- ಹಿತೈಷಿ
ನಾಯಿಗಳು ಚುರುಕು ಜಾಸ್ತಿ ಎಂದು ಹೇಳೋದನ್ನ ಕೇಳಿದ್ದೇವೆ. ನಾವು ಸಾಮಾನ್ಯವಾಗಿ ಶ್ವಾನಗಳನ್ನು ಬಾಂಬ್ ನಿಷ್ಕ್ರಿಯಾ ದಳ ಹಾಗೂ ಪೊಲೀಸರಿಂದ ಟ್ರೈನಿಂಗ್ ಪಡೆಯೋದನ್ನ ನೋಡಿದ್ದೇವೆ.
ಆದರೆ ಇದೇ ಶ್ವಾನಗಳು ಸಮುದ್ರಕ್ಕೆ ಇಳಿದು, ನೀರಿನಲ್ಲಿ ಸಿಲುಕಿರುವವರನ್ನು ರಕ್ಷಿಸುತ್ತವೆ ಅಂದ್ರೆ ನಂಬುತ್ತೀರಾ? ನಂಬಲು ಅಸಾಧ್ಯವೆನಿಸಿದರೂ ನಂಬಲೇಬೇಕು.
ಇದು ಇಟಲಿಯ School of Water Rescue Dogs.
ವಿಶೇಷವೆಂದರೆ ಇಲ್ಲಿ ಶ್ವಾನಗಳು ಜೀವರಕ್ಷಣೆಯ ತರಬೇತಿ ಪಡೆದು, ನೀರಿನಲ್ಲಿ ಕೊಚ್ಚಿ ಹೋಗುವ ಜನರನ್ನು ರಕ್ಷಿಸಲು ಸಜ್ಜಾಗಿರಲಿವೆ. ಈ ತಂಡದಲ್ಲಿ ತರಬೇತಿ ಪಡೆದ 350ಕ್ಕೂ ಹೆಚ್ಚು ಶ್ವಾನಗಳು ನೀರಿನಲ್ಲಿ ಗಸ್ತು ತಿರುಗುತ್ತವೆ.
ಈ ತಂಡ ಕೆಲಸ ಮಾಡೋದು ಹೇಗೆ ಗೊತ್ತಾ?
ಈ ರೆಸ್ಕ್ಯೂ ತಂಡದಲ್ಲಿ ಒಬ್ಬ ತರಬೇತುದಾರನೊಂದಿಗೆ ಒಂದು ನಾಯಿ ಇರಲಿದೆ. ಇವರಿಬ್ಬರ ಜೋಡಿ ಕಡಲ ತೀರವನ್ನು ಕಾಯಲು ಸಹಾಯವಾಗಲಿದೆ.
ಈ ಶ್ವಾನಗಳು ದೇಶದ 30 ಜನನಿಬಿಡ ಕಡಲ ತೀರಗಳಲ್ಲಿ ಜೀವರಕ್ಷಕ ಕೆಲಸ ಮಾಡಲಿದೆ.
ಅಷ್ಟೇ ಅಲ್ಲ ಇವುಗಳ ಇಚ್ಛಾಶಕ್ತಿ ಎಷ್ಟಿದೆ ಎಂದರೆ ಹೆಲಿಕಾಪ್ಟರ್ ಮೂಲಕ ನೀರಿಗೆ ಜಿಗಿದು ಜನರನ್ನು ರಕ್ಷಿಸುತ್ತವೆ. ಈ ಶ್ವಾನಗಳಿಂದ ವರ್ಷದಲ್ಲಿ ಸುಮಾರು 20-30 ಜನರ ಜೀವ ಉಳಿಯುತ್ತವೆ.
ಇತ್ತೀಚೆಗೆ ಈ ಶ್ವಾನಗಳು ಕಡಲ ದಡದಿಂದ 330 ಅಡಿ ದೂರಕ್ಕೆ ಕೊಚ್ಚಿ ಹೋಗಿದ್ದ 8 ಮಕ್ಕಳು ಸೇರಿದಂತೆ ಹಲವು ಕುಟುಂಬಗಳನ್ನು ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಎರೋಸ್, ಮಾಯಾ ಮತ್ತು ಮೀರಾ ಶ್ವಾನಗಳು ತಮ್ಮ ತರಬೇತುದಾರರ ಸಹಾಯದಿಂದ ಸುಮಾರು 15 ನಿಮಿಷದಲ್ಲಿ ಎಲ್ಲರನ್ನೂ ಸುರಕ್ಷಿತವಾಗಿ ಕಡಲ ದಡಕ್ಕೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ.
ಶ್ವಾನಗಳ ತರಬೇತಿ ಹೇಗೆ?
ಈ ರೆಸ್ಕ್ಯೂ ತಂಡದ ಕಾರ್ಯಾಚರಣೆ ಹೆಚ್ಚು ಪ್ರಯಾಸದಾಯಕವಾಗಿರಲಿದೆ. ಇಲ್ಲಿ ತರಬೇತಿ ಪಡೆಯುವ ನಾಯಿಗಳು 18 ತಿಂಗಳ ನಿರಂತರ ಅಭ್ಯಾಸ ಪಡೆಯುತ್ತವೆ. ನಂತರ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳ ಜೊತೆಗೆ ಅವುಗಳನ್ನು ಹೆಲಿಕಾಪ್ಟರ್ ಅಥವಾ ವೇಗವಾಗಿ ಸಂಚರಿಸುವ ದೋಣಿಯಿಂದ ಜಿಗಿಯಲು ಅವಕಾಶ ಕೊಡುತ್ತಾರೆ.
ಇಲ್ಲಿ ತರಬೇತಿ ಪಡೆದ ನಾಯಿಗಳಿಗೆ ಹಾಗೂ ತರಬೇತುದಾರರಿಗೆ ವಿಶೇಷ ಬಾಂಧವ್ಯ ಇರುವುದೇ ತಂಡದ ಯಶಸ್ಸಿಗೆ ಕಾರಣವಾಗಿದೆ.
ಎಲ್ಲೆಲ್ಲಿ ಇದೆ ಈ ರೆಸ್ಕ್ಯೂ ತಂಡ?
ಪ್ರಸ್ತುತ ಇಟಲಿಯಲ್ಲಿರುವ ಈ ಶ್ವಾನ ರೆಸ್ಕ್ಯೂ ತಂಡ ಮುಂದಿನ ದಿನಗಳಲ್ಲಿ ಅಮೆರಿಕ, ಜರ್ಮನಿ, ಸ್ವಿಟ್ಜರ್ಲೆಂಡ್ ಹಾಗೂ ಅರ್ಜೋಸ್ ರಾಷ್ಟ್ರಗಳಲ್ಲಿ ಶ್ವಾನಗಳಿಗಾಗಿ ತರಬೇತಿ ಕೇಂದ್ರ ಸ್ಥಾಪಿಸಲು ಸಂಸ್ಥೆ ಮುಂದಾಗಿದೆ.