Tuesday, July 5, 2022

Latest Posts

ಈ ಹಳ್ಳೀಲಿ ಜೀವನದಲ್ಲಿ ಒಂದು ಬಾರಿ ಮಾತ್ರ ಕೂದಲು ಕತ್ತರಿಸೋಕೆ ಅವಕಾಶ: ಗಿನ್ನಿಸ್ ರೆಕಾರ್ಡ್‌ನಲ್ಲಿದೆ ಇವರ ಹೆಸರು!

ಮೇಘನಾ ಶೆಟ್ಟಿ, ಶಿವಮೊಗ್ಗ

ಉದ್ದ ಕೂದಲು ಹೆಣ್ಣು ಮಕ್ಕಳಿಗೆ ಲಕ್ಷಣ. ಆದರೆ ಉದ್ದ ಕೂದಲು ಇಟ್ಟುಕೊಳ್ಳೋದು, ಅದನ್ನು ಬಾಚುವುದು, ಅದಕ್ಕೆ ಎಣ್ಣೆ ಹಚ್ಚೋದು ಇದೆಲ್ಲಾ ಕಷ್ಟದ ಕೆಲಸ. ಈಗಲೂ ಎಷ್ಟೋ ಮಂದಿ ಕೂದಲನ್ನು ನಿಭಾಯಿಸೋಕೆ ಆಗದೇ ಚಿಕ್ಕದಾಗಿ ಕತ್ತರಿಸಿಬಿಡುತ್ತಾರೆ. ಆದರೆ ಚೈನಾದಲ್ಲಿ ಇರೋ ಈ ಹಳ್ಳಿಯಲ್ಲಿರೋ ಹೆಣ್ಣುಮಕ್ಕಳ ಕೂದಲನ್ನು ನೋಡಿದ್ರೆ ಆಶ್ಚರ್ಯ ಪಡ್ತೀರಾ? ಒಬ್ಬರು ಹೇಗೆ ಇಷ್ಟೊಂದು ಕೂದಲನ್ನು ನಿಭಾಯಿಸೋಕೆ ಸಾಧ್ಯ? ಇವರಿಗೆ ಸೆಕೆ ಆಗೋದಿಲ್ವಾ? ಚಳಿಗಾಲದಲ್ಲಿ ಕೂದಲು ಉದುರೋದಿಲ್ವಾ? ಹೀಗೆಲ್ಲಾ ಅನುಮಾನಗಳು ಹುಟ್ಟೋದು ಸಹಜ.
ಈ ಊರಿನ ಬಗ್ಗೆ, ಇಲ್ಲಿನ ಪದ್ಧತಿ ಬಗ್ಗೆ ತಿಳಿಯೋಣ ಬನ್ನಿ..

ಚೈನಾದ ಗುವಾಂಗ್ಸಿ ಪ್ರದೇಶದ ಹುಯಾಂಗ್ ಲುಯೋ ಗ್ರಾಮದಲ್ಲಿ ಎಲ್ಲ ಹೆಣ್ಣುಮಕ್ಕಳಿಗೆ ಕಾಲವರೆಗೂ ಉದ್ದನೆಯ ಕೂದಲಿದೆ. ಏನಿಲ್ಲಾ ಅಂದ್ರೂ ಪ್ರತಿಯೊಬ್ಬರ ಕೂದಲು 2.3 ಮೀಟರ್‌ನಷ್ಟು ಉದ್ದ ಇದ್ದೇ ಇದೆ. ಇವರ ಉದ್ದ ಕೂದಲನ್ನು ಸಂಭ್ರಮಿಸೋಕೆ ಇಲ್ಲಿ ಪ್ರತೀ ವರ್ಷ ಹಬ್ಬವನ್ನೇ ಮಾಡ್ತಾರೆ. ಅವರಿಗಾಗಿ ಹಬ್ಬ ಮೀಸಲಿದ್ದು, ಉದ್ದ ಕೂದಲಿನ ಎಲ್ಲ ಮಹಿಳೆಯರೂ ಇಲ್ಲಿ ಬಂದು ಸಂಭ್ರಮಿಸುತ್ತಾರೆ.

ಇಂಥ ಕೂದಲನ್ನು ಪ್ರತೀ ದಿನ ಬಾಚುವುದು ತುಂಬಾನೇ ಕಷ್ಟ, ಇವರ ಕೂದಲು ನೇರವಾಗಿ, ಉದ್ದವಾಗಿ ಹಾಗೂ ಸ್ಮೂತ್ ಇರುವುದರಿಂದ ದಿನಾ ತಮ್ಮ ಕೂದಲನ್ನು ಈ ಮಹಿಳೆಯರು ಬಾಚುವುದಿಲ್ಲ. ಆದರೆ ಇದರ ಶುಚಿತ್ವದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಹೆಡ್‌ಬ್ಯಾಂಡ್‌ಗಳನ್ನು ಬಳಸಿ, ಕೂದಲನ್ನು ಕಟ್ಟುತ್ತಾರೆ. ಇದರಿಂದ ಕೂದಲಿಗೆ ಹೆಚ್ಚು ಡ್ಯಾಮೇಜ್ ಆಗೋದಿಲ್ಲ.

ವರ್ಷಕ್ಕೆ ಒಂದು ದಿನ ಇವರಿಗೆಂದೇ ಮೀಸಲಿಟ್ಟಿರೋ ಹಬ್ಬದ ದಿನ ಮಾತ್ರ ಎಲ್ಲರೂ ತಮ್ಮ ಕೂದಲನ್ನು ಪ್ರದರ್ಶನ ಮಾಡುತ್ತಾರೆ. ಅಂದು ಎಲ್ಲರೆದುರು ನದಿಯಲ್ಲಿ ತಳೆ ತೊಳೆದು, ಅಲ್ಲೇ ಕೂದಲು ಒಣಗಿಸಿ ತಲೆ ಬಾಚುತ್ತಾರೆ. ವಿಶ್ವದಲ್ಲೇ ಅಂದಾಜು ಎಲ್ಲ ಮಹಿಳೆಯರೂ ಉದ್ದ ಕೂದಲು ಬಿಟ್ಟಿರೋ ಹಳ್ಳಿ ಹುಯಾಂಗ್ ಆಗಿದ್ದು, ಈಗಾಗಲೇ ಗಿನ್ನಿಸ್ ರೆಕಾರ್ಡ್ ಸೇರಿದೆ. ಉದ್ದ ಕೂದಲಿನ ಅತಿ ಹೆಚ್ಚು ಮಹಿಳೆಯರಿರುವ ಮೊದಲ ಹಾಗೂ ಏಕೈಕ ಗ್ರಾಮ ಎಂಬ ಹೆಗ್ಗಳಿಗೆ ಹುಯಾಂಗ್‌ನದ್ದು.

ಈ ಗ್ರಾಮದಲ್ಲಿ ಯಾವುದೇ ಹೆಣ್ಣು ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಕೂದಲು ಕತ್ತರಿಸಬಹುದು. ಆಕೆಯ ವಯಸ್ಸು 18 ಆದಾಗ ಒಮ್ಮೆ ಕೂದಲನ್ನು ಕತ್ತರಿಸಬಹುದು. ಇದಾದ ನಂತರ ಆಕೆ ಇನ್ನೆಂದೂ ಕೂದಲನ್ನು ಕತ್ತರಿಸುವಂತಿಲ್ಲ.

ಇವರು ವಾರ ಅಥವಾ ಹತ್ತು ದಿನಕ್ಕೊಮ್ಮೆ ಕೂದಲನ್ನು ತೊಳೆಯುತ್ತಾರೆ. ಅಕ್ಕಿ ನೀರಿಗೆ ಕೆಲವು ಆರ್ಗಾನಿಕ್ ಪದಾರ್ಥಗಳನ್ನು ಸೇರಿಸಿ ಕುದಿಸಲಾಗುತ್ತದೆ. ತದನಂತರ ಅದನ್ನು ತಣ್ಣಗೆ ಮಾಡಿ, ತಲೆಸ್ನಾನಕ್ಕೆ ಆ ನೀರನ್ನೇ ಬಳಸಲಾಗುತ್ತದೆ. ಇನ್ನು ಇವರು ಮರದ ಬಾಚಣಗೆಯನ್ನು ಮಾತ್ರ ಬಳಸುತ್ತಾರೆ. ಇದೆಲ್ಲವನ್ನೂ ಕಾಲಕಾಲಕ್ಕೆ ಸರಿಯಾಗಿ ಮಾಡಿದರೆ ಮಾತ್ರ ಕೂದಲು ಆರೋಗ್ಯಕರವಾಗಿ ಕಾಣುತ್ತದೆ.

ಇವರು ಕೂದಲು ಬಿಟ್ಟಿದ್ದನ್ನು ಜನ ನೋಡೋದು ವರ್ಷಕ್ಕೊಮ್ಮೆ ಮಾತ್ರ. ಆದರೆ ಮನೆಗಳಲ್ಲಿ ತಲೆಸ್ನಾನ ಮಾಡಿ ಒಣಗಿಸುವಾಗ ಯಾರಾದರೂ ಕೂದಲನ್ನು ನೋಡಿದರೆ, ಕೂದಲು ನೋಡಿದ ವ್ಯಕ್ತಿ ಆ ಮನೆಯಲ್ಲಿ ಮೂರು ವರ್ಷ ಆಳಾಗಿ ದುಡಿಯಬೇಕಿತ್ತು. ಇದೀಗ ಈ ಪದ್ಧತಿ ಜೀವಂತವಾಗಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss