ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕಲಿ ಜನನ ಪ್ರಮಾಣ ಪತ್ರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಗೆ ಜೀವ ಭಯ ಕಾಡುತ್ತಿದೆ.
ತಮ್ಮನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಬಹುದು ಎಂದು ತಮ್ಮನ್ನು ಹಾಗೂ ಮಗ ಅಬ್ದುಲ್ಲಾ ಅಜಂ ಅವರನ್ನು ರಾಮಪುರದ ವಿಭಿನ್ನ ಜೈಲುಗಳಿಂದ ಪೊಲೀಸರು ಶನಿವಾರ ರಾತ್ರಿ ಸ್ಥಳಾಂತರ ಮಾಡುವುದಕ್ಕೂ ಮುನ್ನ ಆತಂಕ ವ್ಯಕ್ತಪಡಿಸಿದ್ದಾರೆ.
ಪೊಲೀಸರು ತಮ್ಮನ್ನು ಕರೆದುಕೊಂಡು ಹೋಗುವುದಕ್ಕೂ ಮೊದಲು ಮಾಧ್ಯಮಗಳ ಎದುರು ಮಾತನಾಡಿದ ರಾಮಪುರದ ಮಾಜಿ ಶಾಸಕ ಅಜಂ ಖಾನ್, ನಮಗೆ ಏನು ಬೇಕಾದರೂ ಆಗಬಹುದು. ನಮ್ಮ ಪ್ರಯಾಣದ ನಡುವೆಯೇ ನಮ್ಮನ್ನು ಎನ್‌ಕೌಂಟರ್ ಮಾಡುವ ಸಾಧ್ಯತೆ ಇದೆ ಹೇಳಿದ್ದಾರೆ. .
ರಾಮಪುರದ ಹೆಚ್ಚುವರಿ ಎಸ್‌ಪಿ ಸನ್ಸಾರ್ ಸಿಂಗ್, ಭದ್ರತಾ ಕಾರಣಗಳಿಂದ ಅಜಂ ಖಾನ್ ಅವರನ್ನು ಜೈಲಿನಿಂದ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.
ಗುಪ್ತಚರ, ಕಾರಾಗೃಹ ಮತ್ತು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಿಂದ ವರದಿಗಳನ್ನು ಪಡೆದ ಬಳಿಕ, ಕೈದಿಗಳ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ನಾಲ್ಕು ವರ್ಷಗಳ ಹಿಂದಿನ ಸುಳ್ಳು ಜನನ ಪ್ರಮಾಣ ಪತ್ರ ಪ್ರಕರಣದಲ್ಲಿ ಉತ್ತರ ಪ್ರದೇಶದ ನ್ಯಾಯಾಲಯವೊಂದು ಅ 18ರಂದು ಅಜಂ ಖಾನ್, ಅವರ ಪತ್ನಿ ತಂಜೀಮ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಅಜಂ ಅವರಿಗೆ ಶಿಕ್ಷೆ ವಿಧಿಸಿತ್ತು. ಈ ಮೂವರಿಗೂ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 15 ಸಾವಿರ ರೂ ಜುಲ್ಮಾನೆ ವಿಧಿಸಲಾಗಿತ್ತು.