ಹೊಸದಿಗಂತ ವರದಿ, ಉಡುಪಿ:
ಮನೆ, ಅಂಗಡಿ, ಮಳಿಗೆ, ಬ್ಯಾಂಕುಗಳಲ್ಲಿ ಕಳ್ಳತನ ನಡೆಯುವುದು ಗೊತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಒಂದರಲ್ಲಿ ಕಳ್ಳತನವಾಗಿದೆ.
ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ ನಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ. ರಾತ್ರಿ ತ್ರಾಸಿ ಗ್ರಾಮ ಪಂಚಾಯತ್ ಸಭಾ ಭವನದ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು, ಸುಮಾರು 40ಸಾವಿರ ರೂ.ಗಳನ್ನು ಕಳವುಗೈದಿದ್ದಾರೆ. ಪಂಚಾಯತ್ ಕಚೇರಿಯ ಬಾಕ್ಸ್ ಹಾಗೂ ಕಪಾಟುಗಳನ್ನು ಮುರಿದು ಕಳ್ಳರು ಹಣಕ್ಕಾಗಿ ಜಾಲಾಡಿದ್ದಾರೆ. ಈ ವೇಳೆ ಕಚೇರಿಯಲ್ಲಿದ್ದ ಅಮೂಲ್ಯ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಚಾಲಾಕಿ ಕಳ್ಳರು ಕೃತ್ಯ ನಡೆಸುವಾಗ ಪಂಚಾಯತ್ ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದ ವಯರನ್ನು ತುಂಡರಿಸಿದ್ದಾರೆ. ಕಳ್ಳರು ಕೃತ್ಯಕ್ಕೆ ಬಳಸಿದ 2ರಾಡುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ್ ಎಸ್. ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದೆ.