ಚೀನಾ ಕಣ್ಣು ಹಾಕಿರೋ ತವಾಂಗ್ ನ ಯಾಂಗ್ ತ್ಸೇ ಬಗ್ಗೆ ತಿಳಿದಿರಬೇಕಾದ ಸಂಗತಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಮತ್ತೊಮ್ಮೆ ತನ್ನ ಪುಂಡಾಟಿಕೆ ಮೆರೆದಿದೆ. ಭಾರತದ ಹಿಡಿತವಿರೋ ಈ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಸೈನಿಕರನ್ನು ಕಳುಹಿಸುವ ಮೂಲಕ ಚೀನಾ ದರ್ಪ ತೋರಿರುವುದು ಮತ್ತೊಮ್ಮೆ ಗಡಿ ಯಲ್ಲಿ ಉಭಯ ಪಡೆಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಕಣ್ಣು ಹಾಕುತ್ತಿರೋ ತವಾಂಗ್‌ ಸೆಕ್ಟರಿನ ಯಾಂಗ್‌ ತ್ಸೇ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳ ಬಗೆಗಿನ ವಿವರಣೆ ಇಲ್ಲಿದೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿರುವ ಯಾಂಗ್ಟ್ಸೆ ಚೀನಾದ ಪಡೆಗಳಿಂದ ಪದೇ ಪದೇ ಗುರಿಯಾಗುತ್ತಿದೆ. ಭಾರತೀಯ ಪಡೆಗಳನ್ನು ಹಿಮ್ಮೆಟ್ಟಿಸಿ ಈ ಪ್ರದೇಶದವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಚೀನಾ ಹಪಹಪಿಸುತ್ತಿದೆ. ಈ ಪ್ರದೇಶದಲ್ಲಿ ಚೀನಾ ಕ್ಯಾತೆ ತೆಗೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಚೀನಾ ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವ, ಗಸ್ತು ಪಡೆಗಳನ್ನು ಹೆಚ್ಚಿಸುವ ಕೆಲಸ ಮಾಡಿತ್ತು. ಸುಮಾರು 14 ತಿಂಗಳ ಹಿಂದೆ ಅಂದರೆ 2021ರ ಅಕ್ಟೋಬರ್‌ ನಲ್ಲಿಯೂ ಚೀನಾದ ಪಡೆಗಳು ಈ ಪ್ರದೇಶದಲ್ಲಿ ಭಾರತದ ಪಡೆಗಳೊಂದಿಗೆ ಜಗಳವಾಡಿದ್ದವು. ಚೀನಾ 100ಕ್ಕೂ ಹೆಚ್ಚು ಜನರನ್ನು ಇಲ್ಲಿಗೆ ಕಳಿಸಿತ್ತು. 2016ರಲ್ಲಿಯೂ 250ಕ್ಕೂ ಹೆಚ್ಚು ಸೈನಿಕರನ್ನು ಕಳಿಸಿತ್ತು ಚೀನಾ. ಆದರೆ ಭಾರತೀಯ ಪಡೆಗಳು ಚೀನಾ ಪಡೆಗಳನ್ನು ಗುರುತಿಸಿ ಹಿಮ್ಮೆಟ್ಟಿಸಿದ್ದವು.

ಪಶ್ಚಿಮ ವಲಯದಿಂದ ಪೂರ್ವ ವಲಯದ ವರೆಗೆ ವಿಸ್ತರಿಸಿರುವ 3488 ಕಿಮೀ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಸುಮಾರು 25 ಈ ರೀತಿಯ ವಿವಾದಾತ್ಮಕ ಪ್ರದೇಶಗಳಿವೆ. ಅವುಗಳಲ್ಲಿ ಯಾಂಗ್ ತ್ಸೆ ಕೂಡ ಒಂದು. ಚೀನಾ ಈ ಯಾಂಗ್‌ ತ್ಸೆ ಪ್ರದೇಶದ ಮೇಲೆಯೇ ಕಣ್ಣಿಟ್ಟಿದೆ. ಇದು ಸುಮಾರು 17,000 ಅಡಿ ಎತ್ತರದ ಪ್ರದೇಶವಾಗಿರುವುದರಿಂದ ಗಡಿ ಕಾವಲಿನ ದೃಷ್ಟಿಯಿಂದ ಸುತ್ತಲೂ ಕಣ್ಣಿಡಲು ಈ ಪ್ರದೇಶ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಕಾರ್ಯತಂತ್ರದ ದೃಷ್ಟಿಯಿಂದಲೂ ಈ ಪ್ರದೇಶ ಅತ್ಯಂತ ಪ್ರಮುಖ ಎಂದೆನಿಸಿದೆ.

ಮಿಲಿಟರಿ ಪರಿಭಾಷೆಯಲ್ಲಿ ಹೇಳುವುದಾದರೆ ಈ ಪ್ರದೇಶವು ಭಾರತದ ಭಾಗದಲ್ಲಿ ಸೆಲಾ ಪಾಸ್‌ನಲ್ಲಿ ಪ್ರಾಬಲ್ಯ ಸಾಧಿಸಲು ಕಡಿಮೆ ವೈಮಾನಿಕ ದೂರವನ್ನು ಒದಗಿಸುತ್ತದೆ. ಈ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಯು ಭಾರತದ ಕಡೆಯಿಂದ ಪೂರ್ಣ ವೇಗದಲ್ಲಿ ನಡೆಯುತ್ತಿದೆ, ಸೆಲಾ ಪಾಸ್‌ನ ಅಡಿಯಲ್ಲಿ ಸುರಂಗಮಾರ್ಗವು ಪೂರ್ಣಗೊಳ್ಳುವ ಹಂತದಲ್ಲಿದೆ. ಇದನ್ನು ಜೀರ್ಣಿಸಿಕೊಳ್ಳಲು ಚೀನಾದ ಬಳಿ ಸಾಧ್ಯವಾಗುತ್ತಿಲ್ಲ.

ಅಲ್ಲದೇ ಚೀನಾವು ಸಂಪೂರ್ಣ ಅರುಣಾಚಲ ಪ್ರದೇಶವನ್ನೇ ದಕ್ಷಿಣ ಟಿಬೇಟ್‌ ನ ಭಾಗ ಎಂದು ಪ್ರತಿಪಾದಿಸುತ್ತದೆ. ಅದರಲ್ಲೂ ತವಾಂಗ್‌ ಪ್ರದೇಶದ ಮೇಲೆ ಚೀನಾ ಹೆಚ್ಚಿನ ಆಸಕ್ತಿ ತೋರುತ್ತದೆ. ಯುದ್ಧತಂತ್ರದ ಕಾರಣಗಳ ಹೊರತಾಗಿ, ತವಾಂಗ್‌ ನಲ್ಲಿರುವ ಬೌದ್ಧ ಧರ್ಮದ ಲಿಂಕ್‌ನಿಂದಾಗಿ ಚೀನಾವು ಈ ಪ್ರದೇಶದ ಮೇಲೆ ಆಸಕ್ತಿ ಹೊಂದಿದೆ. ಲಾಸಾದಲ್ಲಿರುವ ಪೊಟಾಲಾ ಅರಮನೆಯ ನಂತರ ತವಾಂಗ್ ನಲ್ಲಿರುವ ಬೌದ್ಧ ಮಠವು ಎರಡನೇ ಅತಿ ದೊಡ್ಡ ಮಠವಾಗಿದೆ. 6 ನೇ ದಲೈ ಲಾಮಾ ತವಾಂಗ್‌ನಿಂದ ಬಂದವರು. ಹಾಗಾಗಿ ಪ್ರಸ್ತುತ ದಲೈ ಲಾಮಾ ಅವರು ಹಿಮಾಚಲದ ಧರ್ಮಶಾಲಾದಲ್ಲಿ ತಮ್ಮ ಸ್ಥಾನವನ್ನು ಹೊಂದಿದ್ದು, ಚೀನಾದ ಆಕ್ರಮಣದಲ್ಲಿರುವ ಇಂದಿನ ಟಿಬೆಟ್‌ನ ಹೊರಗೆ ತಮ್ಮ ಉತ್ತರಾಧಿಕಾರಿಯನ್ನು ನೇಮಿಸಬಹುದು ಎಂದು ಚೀನಾ ಭಯಪಡುತ್ತದೆ. ಅಲ್ಲದೇ ಬೌದ್ಧ ಧರ್ಮೀಯರು ನಂಬುವ ಪವಿತ್ರ ಜಲಪಾತವೂ ಕೂಡ ಈ ಪ್ರದೇಶದಲ್ಲಿದೆ.

ತವಾಂಗ್ ಮೇಲಿನ ನಿಯಂತ್ರಣವು ಟಿಬೆಟ್ ಮೇಲೆ ಚೀನಾದ ಹಿಡಿತದೊಂದಿಗೆ ನೇರವಾಗಿ ಸಂಬಂಧಿಸಿದೆ. ದಲೈ ಲಾಮಾ ಅವರು ಟಿಬೆಟ್‌ನ ಹೊರಗೆ ಉತ್ತರಾಧಿಕಾರಿಯನ್ನು ಕಂಡುಕೊಂಡರೆ, ಚೀನೀ ಕಮ್ಯುನಿಸ್ಟ್ ಪಕ್ಷವು ನೇಮಿಸಬಹುದಾದ ಉತ್ತರಾಧಿಕಾರಿ (ಪಂಚೆನ್ ಲಾಮಾ ವಿಷಯದಲ್ಲಿ ಮಾಡಿದಂತೆ) ಟಿಬೆಟ್‌ನಲ್ಲಿ ಪರಿಣಾಮಕಾರಿ ಪ್ರಭಾವವನ್ನು ಬೀರಲು ಸಾಧ್ಯವಾಗುವುದಿಲ್ಲ. ಇದು ಬೌದ್ಧ ಧರ್ಮವನ್ನು ಚೈನಾದಪರವಾಗಿ ಮಾಡುವ ದೀರ್ಘಾವಧಿಯ ಯೋಜನೆಗೆ ಅಡ್ಡಗಾಲಾಗುತ್ತದೆ ಎಂದು ಕೆಲ ವರದಿಗಳು ವಿಶ್ಲೇಷಿಸಿವೆ.

ಹಾಗಾಗಿ ಯಾಂಗ್‌ ತ್ಸೇ ಮೇಲೆ ನಿಯಂತ್ರಣ ಸಾಧಿಸಿದರೆ ತವಾಂಗ್‌ ಪ್ರದೇಶ ಮೆಲೆಯೂ ಹಿಡಿತ ಸಾಧಿಸಿದಂತಾಗುತ್ತದೆ ಎಂದು ಚೀನಾ ಆಲೋಚಿಸುತ್ತಿದೆ. ಹೀಗಾಗಿ ಈ ಭಾಗದಲ್ಲಿ ಚೀನಾ ಪದೇ ಪದೇ ಕ್ಯಾತೆ ತೆಗೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!