Friday, July 1, 2022

Latest Posts

ಕೋವಿಡ್ ಶವಗಳ ಪಾಲಿನ ಮುಕ್ತಿದಾತ ಮಂಗಳೂರಿನ ಈ ಕಾರ್ಪೋರೇಟರ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….

ಹೊಸದಿಗಂತ ವರದಿ, ಮಂಗಳೂರು:

ಕೋವಿಡ್ ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಕುಟುಂಬಿಕರೇ ಹಿಂದೇಟು ಹಾಕುವ ಪರಿಸ್ಥಿತಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಸ್ವತಃ ಮುಂದೆನಿಂತು ಅಂತ್ಯಸಂಸ್ಕಾರ ನಡೆಸುವ ಮೂಲಕ ಮಾದರಿಯಾಗಿದ್ದಾರೆ.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಮಂಗಳೂರು ಕಚೇರಿಯ ಕೋವಿಡ್ ವಾರ್ ರೂಂನ ಅಂತ್ಯಸಂಸ್ಕಾರ ವಿಭಾಗದ ಪ್ರಮುಖರಾಗಿರುವ ಕಾರ್ಪೋರೇಟರ್ ಗಣೇಶ್ ಕುಲಾಲ್ ಅವರು ಈ ಮಾನವೀಯ ಕಾರ್ಯ ನಡೆಸುತ್ತಿರುವ ಜನಪ್ರತಿನಿಧಿ.
ಕಳೆದ 15 ದಿನಗಳಲ್ಲಿ ಸಂಸದರ ವಾರ್ ರೂಂಗೆ ಬಂದ ಕರೆಗಳನ್ನು ಆಧರಿಸಿ 12 ಮಂದಿ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಗಣೇಶ್ ಕುಲಾಲ್ ವ್ಯವಸ್ಥೆ ಮಾಡಿದ್ದಾರೆ. ಇತರ ಖಾಯಿಲೆಯಿಂದ ಮೃತಪಟ್ಟ ಮೂವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕೋವಿಡ್ ಸಂದರ್ಭ ಮಾತ್ರವಲ್ಲದೆ ಈ ಹಿಂದೆಯೂ 500 ಕ್ಕೂ ಅಧಿಕ ಮಂದಿಯ ಅಂತ್ಯಕ್ರಿಯೆಯನ್ನು ಇವರು ಸ್ವತಃ ಮುಂದೆ ನಿಂತು ನೆರವೇರಿಸಿದ್ದಾರಂತೆ.
ಕೋವಿಡ್ ವಾರ್ ರೂಂನಲ್ಲೂ ಕೆಲಸ
ಕೋವಿಡ್‌ನಿಂದ ಮೃತಪಟ್ಟವರ ಪೈಕಿ ಕೆಲ ಪ್ರಕರಣಗಳಲ್ಲಿ ಗಣೇಶ್ ಅವರೇ ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರ ಅಂತಿಮ ವಿಧಿವಿಧಾನ ನಡೆಸಿದ್ದಾರೆ. ಆ ಮೂಲಕ ತಾನೋರ್ವ ನೈಜ ಕಾಳಜಿಯುಳ್ಳ ಜನಪ್ರತಿನಿಧಿ ಎಂಬುದನ್ನು ಶ್ರುತಪಡಿಸಿದ್ದಾರೆ.
ಪಕ್ಷ ಹಾಗೂ ಸಂಸದ ನಳಿನ್ ಕುಮಾರ್ ಅವರ ಸೂಚನೆಯಂತೆ ಕೋವಿಡ್ ವಾರ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ವಾರ್ ರೂಂಗೆ ಬಂದ ಕರೆಯಂತೆ ನಾವು ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಅನಾಥರು, ಕುಟುಂಬಿಕರು ಮುಂದೆ ಬಾರದ ಪ್ರಕರಣಗಳಲ್ಲಿ ನಮ್ಮ ತಂಡದ ಸದಸ್ಯರೇ ಈ ಕಾರ್ಯ ನಿರ್ವಹಿಸುತ್ತೇವೆ. ಹಣ ಇಲ್ಲದವರಿಗೆ ಮನಪಾದಿಂದ ಅಂತ್ಯಸಂಸ್ಕಾರದ ಶುಲ್ಕ ಭರಿಸುತ್ತೇವೆ. ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದಿದ್ದರೆ ಕಡಿಮೆ ವೆಚ್ಚದಲ್ಲಿ ಅದನ್ನೂ ಒದಗಿಸುತ್ತೇವೆ ಎಂದು ಗಣೇಶ್ ಕುಲಾಲ್ `ಹೊಸ ದಿಗಂತ ‘ಕ್ಕೆ ತಿಳಿಸಿದರು.
15 ದಿನಗಳಲ್ಲಿ 12 ಮಂದಿಯ ಅಂತ್ಯಕ್ರಿಯೆ
ಸಂಸದರ ವಾರ್ ರೂಂ ಮೂಲಕ ಗಣೇಶ್ ಕುಲಾಲ್ ಅವರ ನೇತೃತ್ವದಲ್ಲಿ ಕಳೆದ 15 ದಿನಗಳಲ್ಲಿ 12 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ವಿಧಿ ನಡೆಸಲಾಗಿದೆ. ಇದರಲ್ಲಿ ಮಂಗಳೂರು ನಗರ ಮಾತ್ರವಲ್ಲದೆ ಕೇರಳ, ಮಡಿಕೇರಿಯ ಸೋಂಕಿತರು, ಸುರತ್ಕಲ್, ಮುಲ್ಕಿ, ಗುರುಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ಸೋಂಕಿತರು ಸೇರಿದ್ದಾರೆ. ಜತೆಗೆ ಇತರ ಖಾಯಿಲೆಗಳಿಂದ ಮರಣ ಹೊಂದಿದ ಮೂವರ ಅಂತ್ಯಸಂಸ್ಕಾರ ವನ್ನು ಮಾನವೀಯ ನೆಲೆಯಲ್ಲಿ ನಡೆಸಲಾಗಿದೆ. ಮಂಗಳೂರಿನ ಬೋಳೂರು ಸ್ಮಶಾನದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ತಂಡದಲ್ಲಿ ಇತರ ಮೂವರು ಕಾರ್ಯಕರ್ತರಿದ್ದು, ಅಗತ್ಯವಿದ್ದಲ್ಲಿ ಅವರೂ ಆಗಮಿಸುತ್ತಾರೆ.
ಯಾರು ಕರೆ ಮಾಡಿದರೂ ನೆರವಿಗೆ ಸಿದ್ಧ
ಬಿಜೆಪಿ ಪ್ರಮುಖರ ಸೂಚನೆಯಂತೆ ಸಂಸದರ ಕೋವಿಡ್ ವಾರ್ ರೂಂನಲ್ಲಿ ಕಾರ್ಯನಿರ್ಯಹಿಸುತ್ತಿದ್ದೇನೆ. ವಾರ್ ರೂಂ ಗೆ ಯಾರೇ ಕರೆ ಮಾಡಿದರೂ ಅವರ ಕೋರಿಕೆಯಂತೆ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಕಾರ್ಯ ನನಗೆ ಹೊಸದಲ್ಲ. ಕಳೆದ 27 ವರ್ಷದಿಂದ ಇಂತಹಾ ಸೇವಾ ಕಾರ್ಯ ನಡೆಸುತ್ತಿದ್ದೇನೆ. ಇದುವರೆಗೆ ಒಟ್ಟು 500 ಕ್ಕೂ ಹೆಚ್ಚು ಮಂದಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ನೆರವಾಗಿದ್ದೇನೆ ಎನ್ನುತ್ತಾರೆ ಕಾರ್ಪೋರೇಟರ್ ಗಣೇಶ್ ಕುಲಾಲ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss