ʼಸಮೋಸಾʼದಿಂದ ವಾರ್ಷಿಕ 45 ಕೋಟಿ ರೂ. ಗಳಿಸ್ತಿದಾರೆ ಈ ದಂಪತಿ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ವಂತ ಉದ್ದಿಮೆ ಕಟ್ಟಿ ಬೆಳೆಸಬೇಕು ಎನ್ನುವ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಂದು ದಂಪತಿ ಲಕ್ಷಗಟ್ಟಲೇ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಸಮೋಸಾ ಮಾರಾಟದ ಮೂಲಕ ವಾರ್ಷಿಕವಾಗಿ 45 ಕೋಟಿ ರೂಪಾಯಿಗಳ ಆದಾಯ ಗಳಿಸುತ್ತಿದ್ದಾರೆ. ಸಮೋಸಾ ಮಾರಾಟ ಇಷ್ಟೆಲ್ಲಾ ಆದಾಯ ತಂದುಕೊಡುತ್ತಾ? ಅಂತ ನಿಮಗೆ ಆಶ್ಚರ್ಯವಾಗಬಹುದು.

ಪ್ರತೀ ಭಾರತೀಯ ಮೆಚ್ಚಿಕೊಳ್ಳುವ ತಿಂಡಿಯೆಂದರೆ ಅದು ಸಮೋಸಾ. ಇದನ್ನೇ ಆಧಾರವಾಗಿಟ್ಟುಕೊಂಡು ಉದ್ಯೋಗ ಬಿಟ್ಟು ಉದ್ದಿಮೆ ಆರಂಭಿಸಿದ ದಂಪತಿ ಇದೀಗ ಕೋಟಿಗಟ್ಟಲೇ ದುಡಿಯುತ್ತಿದ್ದಾರೆ. ನೀವು ಬೆಂಗಳೂರಿಗರಾಗಿದ್ದರೆ ʼಸಮೋಸಾ ಸಿಂಗ್‌ʼ ಹೆಸರನ್ನು ನೀವು ಕೇಳಿರಬಹುದು. ಈಗ ಓದ ಹೊರಟಿರೋದು ಈ ಉದ್ದಿಮೆಯ ಸ್ಥಾಪಕರ ಕಥೆಯನ್ನು.

ಹರಿಯಾಣದಲ್ಲಿ ಬಯೋಟೆಕ್ನಾಲಜಿಯಲ್ಲಿ ಬಿ-ಟೆಕ್ ಓದುತ್ತಿದ್ದಾಗ ನಿಧಿ ಸಿಂಗ್‌ ಹಾಗು ಶಿಖರ್‌ ವೀರ್‌ ಸಿಂಗ್‌ ಪರಿಚಯವಾಗಿದ್ದರು. ನಂತರದಲ್ಲಿ ಅವರ ಸ್ನೇಹ ಪ್ರಿತಿಯಾಗಿ ಬದಲಾಗಿ ಐದು ವರ್ಷಗಳ ಹಿಂದೆ ವಿವಾಹವಾದರು. ಶಿಖರ್ ಹೈದರಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸಸ್‌ನಿಂದ ಎಂಟೆಕ್ ಪೂರ್ಣಗೊಳಿಸಿ ಭಾರತದ ಪ್ರಸಿದ್ದ ಬಯೋಕಾನ್‌ ಸಂಸ್ಥೆಯಲ್ಲಿ ಪ್ರಿನ್ಸಿಪಾಲ್‌ ಸೈಂಟಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಿಧಿ ಸಿಂಗ್‌ ಮತ್ತೊಂದು ಫಾರ್ಮಾ ಕಂಪನಿಯಲ್ಲಿ ಸೈಂಟಿಸ್ಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ವರ್ಷಕ್ಕೆ 30 ಲಕ್ಷ ರೂಪಾಯಿ ಸಂಬಳದ ಪ್ಯಾಕೇಜ್‌ ಅವರಿಗಿತ್ತು. ಆದರೆ 2015ರಲ್ಲಿ ಸ್ವಂತ ಉದ್ಯೋಗ ಮಾಡಬೇಕೆನ್ನುವ ಹಂಬಲದಿಂದ ಉದ್ಯೋಗ ತೊರೆದ ದಂಪತಿ ಬೆಂಗಳೂರಿಗೆ ಬಂದು ಆರಂಭಿಸಿದ್ದೇ ʼಸಮೋಸಾ ಸಿಂಗ್‌ʼ.

ಉದ್ಯೋಗ ಮಾಡುವ ಸಂದರ್ಭದಲ್ಲಿ ಗಳಿಸಿದ್ದ ಉಳಿತಾಯದ ಹಣದಿಂದಲೇ ವ್ಯಾಪಾರ ಶುರುವಿಟ್ಟರು. ಆದರೆ ಅವರಿಗೆ ತುಸು ದೊಡ್ಡದಾದ ಕಿಚನ್‌ ಅವಶ್ಯಕತೆಯಿತ್ತು. ಹಾಗಾಗಿ ತಮ್ಮ ಕನಸಿನ ಮನೆಯನ್ನು 80 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಆ ಹಣದಿಂದಲೇ ವ್ಯಾಪಾರ ಆರಂಭಿಸಿದರು. ಇಂದು ಅವರ ವಹಿವಾಟು ಎಷ್ಟರ ಮಟ್ಟಿಗೆ ಬೆಳೆದಿದೆಯೆಂದರೆ ಅದರ ವಾರ್ಷಿಕ ವಹಿವಾಟು 45 ಕೋಟಿ ರೂಪಾಯಿಗಳಷ್ಟಿದೆ. ಅಂದರೆ ದಿನಕ್ಕೆ ಬರೋಬ್ಬರಿ 12 ಲಕ್ಷ ರೂಪಾಯಿಗಳಷ್ಟಿದೆ.

ಶಿಖರ್‌ ಕಾಲೇಜು ದಿನದಲ್ಲಿದ್ದಾಗಲೇ ಸಮೋಸಾ ಮಾರಾಟ ಮಾಡುವ ಆಸೆ ಹುಟ್ಟಿತ್ತಂತೆ. ಆದರೆ ಸೈಂಟಿಸ್ಟ್‌ ಆಗೆಂದು ನಿಧಿ ಒತ್ತಾಯಿಸಿದ್ದರು. ಪುಟ್ಟ ಹುಡುಗನೊಬ್ಬ ಸಮೋಸಾಕ್ಕಾಗಿ ಅಳುತ್ತ ಹಠ ಮಾಡುತ್ತಿರುವುದನ್ನು ನೋಡಿ ಸ್ನಾಕ್‌ ಬಿಸಿನೆಸ್‌ ಆರಂಭಿಸಿದರೇ ಸಮೋಸಾವನ್ನೇ ಆಯ್ದುಕೊಳ್ಳಬೇಕು ಎಂದು ಶಿಖರ್‌ ಸಿಂಗ್‌ ಅಂದೇ ನಿರ್ಧರಿಸಿದ್ದರಂತೆ.

ಇಂದು ʼಸಮೋಸಾ ಸಿಂಗ್‌ʼ ಅವರ ಸಮೋಸಾವನ್ನು ಬೆಂಗಳೂರಿಗರು ಮೆಚ್ಚಿಕೊಂಡಿದ್ದಾರೆ. ಅವರ ಮೆನುವಿನಲ್ಲಿ ಕಡಾಯಿ ಪನೀರ್ ಸಮೋಸಾಗಳಂತಹ ನವನವೀನ ವಿಧಗಳಿವೆ. ಈ ವ್ಯಾಪಾರವನ್ನು ವಿಸ್ತರಿಸಲು ಯೋಜನೆಯನ್ನೂ ಹಾಕಿಕೊಂಡಿದ್ದಾರಂತೆ ಸಿಂಗ್‌ ದಂಪತಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!