ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ಸಾಕು ನಾಯಿ ನೀವು ಆಫೀಸಿಗೆ ಹೋಗುವಾಗ ನಿಮ್ಮ ಹಿಂದೆಯೇ ಬರುತ್ತದಾ? ಹೆಚ್ಚೆಂದರೆ ಮೆಟ್ರೋ ಅಥವಾ ಬಸ್ ಬಳಿ ಬರಬಹುದು. ಆದರೆ ಇಲ್ಲೊಂದು ನಾಯಿ ಮೆಟ್ರೋ, ಬಸ್ ಎಲ್ಲದರಲ್ಲಿಯೂ ಪ್ರಯಾಣಿಸುತ್ತದೆ.
ಹೌದು, ಆಶ್ಚರ್ಯ ಎನಿಸಿದರೂ ನಿಜ. ಇಸ್ತಾನ್ಬುಲ್ನಲ್ಲಿರುವ ‘ಬೋಜಿ’ ಎಂಬ ನಾಯಿ ದಿನವೂ ಟ್ರಾವೆಲ್ ಮಾಡುತ್ತದೆ. ನಿರ್ದಿಷ್ಟವಾದ ಜಾಗಕ್ಕೆ ಹೋಗಿ ಇದು ತಲುಪುವುದಿಲ್ಲ, ಟ್ರಾವೆಲ್ ಮಾಡುತ್ತದೆ ಅಷ್ಟೆ.
ಊರು ಸುತ್ತಲು ಮನುಷ್ಯರ ಹಾಗೆ ಈ ನಾಯಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತದೆ. ಇದು ಒಂದು ದಿನದ ಕಥೆ ಅಲ್ಲ, ಪ್ರತಿದಿನವೂ ಬೋಜಿ ಸುತ್ತಾಡುತ್ತದೆ, ನಮ್ಮಂತೆಯೇ ಕಿಟಕಿ ಸೀಟು ಕೇಳುತ್ತದೆ. ವಿಂಡೋ ಸೀಟ್ನಲ್ಲಿ ಕುಳಿತು ಕಿಟಕಿಯಿಂದ ಪ್ರಪಂಚ ನೋಡುತ್ತದೆ.
ಸುರಂಗ ಮಾರ್ಗಗಳಲ್ಲಿ ಪ್ರಯಾಣಿಸುವುದು ಕೂಡ ಬೋಜಿಗೆ ಗೊತ್ತಿದೆ. ಒಂದೆರಡು ದಿನ ನಾಯಿಯ ಚಲನವಲನವನ್ನು ಇಸ್ತಾನ್ಬುಲ್ ಮುನ್ಸಿಪಾಲಿಟಿ ಅಧಿಕಾರಿಗಳು ಗಮನಿಸಿದ್ದರು. ಒಂದೇ ನಾಯಿ ಪ್ರತಿದಿನ, ಒಂದೇ ಸಮಯಕ್ಕೆ ರೈಲು, ಬಸ್ ಹತ್ತುತ್ತದೆ. ಸಂಜೆ ವಾಪಾಸಾಗುತ್ತದೆ. ಇದು ಸಾಮಾನ್ಯ ಎಂದಂತೂ ಅನಿಸಲಿಲ್ಲ. ಹಾಗಾಗಿ ನಾಯಿಗೆ ಟ್ರಾಕರ್ ಅಳವಡಿಸಲಾಯಿತು. ಮೈಕ್ರೋಚಿಪ್ ಮತ್ತು ಫೋನ್ ಅಪ್ಲಿಕೇಷನ್ ಬಳಸಿ ನಾಯಿ ಎಲ್ಲೆಲ್ಲಿ ಹೋಗುತ್ತದೆ, ಏನು ಮಾಡುತ್ತದೆ ನಿಗಾ ಇಡಲಾಯ್ತು. ಬೋಜಿ ಪ್ರತಿದಿನ 30 ಕಿ.ಮೀವರೆಗೂ ಪ್ರಯಾಣಿಸುತ್ತದೆ. ದೋಣಿ, ರೈಲಿನಲ್ಲಿ ಹೇಗೆ ಹತ್ತಬೇಕು, ಇಳಿಯಬೇಕು ಎಂಬುದನ್ನು ನಾಯಿ ಕಲಿತಿದೆ.
ದಿನವೂ ನಾಯಿಯನ್ನು ನೋಡುವ ಪ್ರಯಾಣಿಕರು, ಬೋಜಿಯ ಚಾಕಚಕ್ಯತೆ ಕಂಡು ಖುಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಅದರ ಬಗ್ಗೆ ಬರೆಯಲು ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೋಜಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.