ಹೊಸದಿಗಂತ ಆನ್ಲೈನ್ ಡೆಸ್ಕ್:
ಚಿಕ್ಕಬಳ್ಳಾಪುರದ ಸ್ಫೋಟ ಪ್ರಕರಣಕ್ಕೆ ಸರ್ಕಾರದ ಬೇಜಾವಾಬ್ದಾರಿತನವೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಅಸಡ್ಡೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಎಂದಿದ್ದಾರೆ.
ಒಂದು ತಿಂಗಳಲ್ಲಿ ಇಂಥದ್ದೇ ದುರ್ಘಟನೆ ಎರಡು ಬಾರಿ ನಡೆಯುತ್ತದೆ ಎಂದರೆ ಅದಕ್ಕೇನು ಅರ್ಥ? ಶಿವಮೊಗ್ಗ ಪ್ರಕರಣ ಆಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು.
ಆದರೆ ಸರ್ಕಾರಕ್ಕೆ ತನ್ನ ಆಂತರಿಕ ಸಮಸ್ಯೆಗಳೇ ದೊಡ್ಡದು. ಇತ್ತ ಗಮನ ಹರಿಸಲು ಅವರಿಗೆ ಸಮಯವೇ ಇಲ್ಲ, ಮಾಧ್ಯಮಗಳ ಮುಂದೆ ಬಂದು, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ಕಳೆದ ಬಾರಿ ಕಠಿಣ ಕ್ರಮ ಕೈಗೊಂಡಿದ್ದರೆ ಮತ್ತೆ ಹೀಗೆ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಎನ್ನುವ ಮಾತು ಹಾಸ್ಯಾಸ್ಪದವಾಗಿದೆ. ಹೇಳಿಕೆ ನೀಡುವ ಸರ್ಕಾರದ ಪ್ರತಿನಿಧಿಗಳು ಜೋಕರ್ ಗಳಂತೆ ಕಾಣುತ್ತಿದ್ದಾರೆ. ಇದರ ಪರಿಣಾಮವೇ ಚಿಕ್ಕಬಳ್ಳಾಪುರದಲ್ಲಿ ಆರು ಮುಗ್ಧ ಜೀವಿಗಳ ಬಲಿ ಆಗಿರುವುದು ಎಂದಿದ್ದಾರೆ.