ಹಿಂಗಾತ ನೋಡ್ರಿ ಹಾವೇರಿ ಸಾಹಿತ್ಯ ಸಮ್ಮೇಳನ…!

– ನಿತೀಶ ಡಂಬಳ

ಹಾವೇರಿ: ಒಂದು ಭವ್ಯ ವೇದಿಕೆ, ಎರಡು ಅನ್ಯ ವೇದಿಕೆ ಮೂರು ದಿನ ನಡೆದ 33 ವಿಷಯ ಗೋಷ್ಠಿ, 3 ಕವಿ ಗೋಷ್ಠಿ, 171 ವಿಷಯ ತಜ್ಞರು, 75 ಕವಿಗಳು, 86 ಸಾಧಕ ಸನ್ಮಾನಿತರು, ಸಾಹಿತಿಗಳು, ಕಣ್ಣು ದೂರ ಹಾಯಿಸಿದಷ್ಟು ಜನಜಂಗುಳಿ ಎಲ್ಲ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದೊಳಗ ಕಂಡ ಅಚ್ಚರಿಗಳು.

ಅಬಾಬಾಬಾ ಅದೇನು ವೇದಿಕೆ, ಅದೇನು ಅಲಂಕಾರ, ಅದೇನು ವಾತಾವರಣ, ಅದೆಷ್ಟು ಪುಸ್ತಕಗಳು ಎಂಥವಂಗ ಆದ್ರೂ ಇಲ್ಲಿ ಬಂದ್ರ ಸಾಹಿತ್ಯದ ರುಚಿ ಹತ್ತತಿತ್ತು. ತಲಿ ಒಳಗ ಕೈಆಡಿಸುವ ವಿಚಾರ ಗೋಷ್ಠಿ, ಗಹನ ವಿಷಯ, ಮಕ್ಕಳು, ಮಹಿಳೆ, ಕೃಷಿ, ‌ಪುಸ್ತಕ, ಮಾಧ್ಯಮ,‌ ಸಿನಿಮಾ, ಜನಪದ, ಶರಣ ಪರಂಪರೆ, ಕಲಾವೈವಿಧ್ಯ, ಮರೆಯಲಾಗದ ಮಹನೀಯರು ಹೆಸರು ಸಾಹಿತ್ಯ ಸಮ್ಮೇಳನ ಆದ್ರೂ ಚರ್ಚೆ ಆದ ವಿಷಯ ಬಹಳಷ್ಟು.

ಸಾಹಿತ್ಯ ‌ಸಮ್ಮೇಳನ ಅಂದ್ರ ಕವಿಗೋಷ್ಠಿ ಇರಲಿಲ್ಲಾಂದ್ರ ಹೆಂಗ? ಮೂರು ದಿನ ನಡೆದ ಕವಿಗೋಷ್ಠಿಯೊಳಗ ಎಲ್ಲರ ಕವನ‌ ಕೇಳಿ ಮನಸ್ಸು ಪ್ರಸನ್ನ ಆತು. ಎಂಥೆಂಥ ದೊಡ್ಡ ದೊಡ್ಡ ವಿಚಾರಗಳನ್ನ ಅಗ್ದಿ ಸಣ್ಣ ಕವನ ರೂಪದೊಳಗ ನಮ್ಮ‌ನಾಡಿನ ಕವಿಗಳು ಓದಿ ಹೇಳಿದ್ರು. ಇನ್ನ ಸಾಂಸ್ಕೃತಿಕ ಕಾರ್ಯಕ್ರಮ ಹೇಳೋದ ಬ್ಯಾಡ. ನೀವ ಬಂದು ಖುದ್ದು ನೋಡಿ ಆನಂದಿಸಬೇಕಿತ್ತು. ಸಂಗೀತ, ವಾದ್ಯ, ನೃತ್ಯ, ತೊಗಲ ಗೊಂಬಿ ಆಟ, ಬಗೆಬಗೆ ಜನಪದ ಕಲಾ ಪ್ರಕಾರ ಕಣ್ಣಿಗೆ ನೋಡಲಿಕ್ಕೆ ಮಹಾ ಹಬ್ಬ.

ಮೊದಲೇ ದಿನದ ಮೆರವಣಿಗೆ ಇಂದ ಹಿಡದು ಸಮಾರೋಪದ ತನಕ ಎಲ್ಲ ಅಚ್ಚುಕಟ್ಟಿನ ವ್ಯವಸ್ಥೆ. ಸಮಯಕ್ಕ ಭಾಳ ಒತ್ತು ನೀಡಿದ್ದು ಎಲ್ಲರೂ ಮೆಚ್ಚಿಕೊಂಡರು. ಪುಸ್ತಕ‌ ಖರೀದಿನೂ ಜೊರಾಗಿತ್ತು. ಇದಲ್ಲದ ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ವಾರ್ತಾ ಇಲಾಖೆಯ ಕರ್ನಾಟಕ ದರ್ಶನ, ಅರಣ್ಯ ಇಲಾಖೆಯ ವಸ್ತು ಪ್ರದರ್ಶನ ನೋಡುವಂಗ ಇತ್ತು. ಸಿಕ್ಕ ಸಿಕ್ಕಲ್ಲೆ ಸೆಲ್ಫಿ ತಕ್ಕೊಳೊ ಮಂದಿ, ಹಿಂಡ ಹಿಂಡಾಗಿ ಬರ್ತಿದ್ದ ಯುವಕರು, ಯುವತ್ಯಾರು, ವಾಣಿಜ್ಯ ಮಳಿಗೆಗೆ‌ ಮುಗಿ ಬಿಳೋದು, ಮೋಜು, ಮಸ್ತಿ, ರುಚಿ‌ ರುಚಿ ತಿನಿಸು ಮಸ್ತ ಇತ್ತು. ಬರೊಬ್ಬರಿ 5 ಲಕ್ಷ ಜನ ಸಮ್ಮೇಳನಕ್ಕ ಸಾಕ್ಷಿಯಾಗಿದ್ರು. ಒಟ್ಟಿನ್ಯಾಗ ಹಾವೇರಿ ಸಾಹಿತ್ಯ ಸಮ್ಮೇಳನ ನೆನಪಿಡುವಂಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!