ಈ ವರ್ಷಾಂತ್ಯಕ್ಕೆ ‘ಹಾಲ್ಕುರಿಕೆ ಕೆರೆ’ – ‘ಪಟ್ಟದೇವರ ಕೆರೆ’ಗೆ ಹೇಮಾವತಿ ನಾಲೆ ಮೂಲಕ ನೀರು: ಸಚಿವ ನಾಗೇಶ್

ಹೊಸ ದಿಗಂತ ವರದಿ, ತುಮಕೂರು:

ತಿಪಟೂರಿನ ತಾಲೂಕಿನ ‘ಹಾಲ್ಕುರಿಕೆ ಕೆರೆ’ ಹಾಗೂ ‘ಪಟ್ಟದೇವರ ಕೆರೆ’ಗೆ ಈ ವರ್ಷಾಂತ್ಯಕ್ಕೆ ಹೇಮಾವತಿ ನಾಲೆ ಮೂಲಕ ನೀರು ತುಂಬಿಸುವ ಗುರಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದ ಶ್ರೀ ಕೆಂಪಮ್ಮ ದೇವಿ ದೇವಾಲಯ ಆವರಣದಲ್ಲಿ ಮಂಗಳವಾರ (ಮೇ 3) ಆಯೋಜಿಸಿದ್ದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಮತ್ತು ಹಾಲ್ಕುರಿಕೆ ಹಾಗೂ ಸುತ್ತಲಿನ ಗ್ರಾಮಗಳ ನಿವಾಸಿಗಳಿಂದ ‘ಅಭಿನಂದನಾ ಸಮಾರಂಭ’ದಲ್ಲಿ ಭಾಗವಹಿಸಿ ಸಚಿವ ನಾಗೇಶ್ ಅವರು ಮಾತನಾಡಿದರು.
‘ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಈ ವರ್ಷಾಂತ್ಯದಲ್ಲಿ ನೀರು ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಅದಕ್ಕೆ ಜನರ ಸಹಕಾರ ಸಿಗಬೇಕು. ಜನರ ಸಹಕಾರದಿಂದ ಕಾಮಗಾರಿ ಬೇಗ ಮುಗಿಯುತ್ತದೆ. ಕೆರೆಗಳು ತುಂಬಿದರೆ ಸುತ್ತಲಿನ ಹಲವು ಹಳ್ಳಿಗಳಿಗೆ ಅನುಕೂಲವಾಗುತ್ತದೆ. ಅಂತರ್ಜಲ ಹೆಚ್ಚಳವಾಗುತ್ತದೆ. ಇದರಿಂದ ಕೆರೆ, ಕುಂಟೆ, ಬೋರ್‌ವೆಲ್‌ನಲ್ಲಿ ನೀರು ಲಭ್ಯವಾಗುತ್ತದೆ. ಕೃಷಿ, ತೋಟಗಾರಿಕೆ ಚಟುವಟಿಕೆಗಳು ಉತ್ತಮಗೊಂಡು ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಬಿ.ಸಿ. ನಾಗೇಶ್ ಹೇಳಿದರು.
‘ಹಾಲ್ಕುರಿಕೆ ಹಾಗೂ ಪಟ್ಟದೇವರ ಕೆರೆ ಮಾತ್ರವಲ್ಲದೇ ಅರಳಗುಪ್ಪೆ, ರಂಗಾಪುರ, ಸಣ್ಣೇನಹಳ್ಳಿ ಸೇರಿದಂತೆ ತಿಪಟೂರು ತಾಲೂಕಿನ ಎಲ್ಲ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿ ಸಮೃದ್ಧಿಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಬಾಕಿ ಉಳಿದಿರುವ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಿರಂತರವಾಗಿ ಮುಂದುವರೆಯಲಿದೆ’ ಎಂದು ಸಚಿವರು ತಿಳಿಸಿದರು.
‘ಹೇಮಾವತಿ ನಾಲೆ ಯೋಜನೆ ಅನುಷ್ಠಾನಕ್ಕೆ ಕೆಲವು ಅಡೆತಡೆಗಳು ಉಂಟಾಗಿದ್ದವು. ಅರಣ್ಯ ಇಲಾಖೆಯಿಂದಲೂ ಅಡೆತಡೆ ಉಂಟಾಗಿತ್ತು. ಆದರೆ, ಈ ಎಲ್ಲವನ್ನು ಪರಿಹರಿಸಿ ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡಲಾಯಿತು’ ಎಂದು ಸಚಿವರು ನುಡಿದರು.
‘ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿಪಟೂರಿನ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ನೀಡಿರುವ ಕೊಡುಗೆ ಅಪಾರ. ಜನರ ಆಶೀರ್ವಾದದಿಂದ ತಾಲೂಕಿನಲ್ಲಿ ನೀರಾವರಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದೇನೆ. ಅದನ್ನು ಉದ್ಘಾಟನೆ ಮಾಡುವ ಅವಕಾಶವನ್ನು ನೀವೇ ಕಲ್ಪಿಸಿದ್ದೀರಿ. ನಿಮ್ಮ ಸೇವೆ ಮಾಡುವ ಆಸೆಗೆ ನಿಮ್ಮ ಮೂಲಕ ಭಗವಂತ ಆಶೀರ್ವಾದ ಮಾಡಿದ್ದಾನೆ’ ಎಂದು ಸಚಿವ ನಾಗೇಶ್ ಹೇಳಿದರು.
‘ಕಳೆದ ಬಾರಿ ಶಾಸಕನಾಗಿದ್ದ ಸಂದರ್ಭದಲ್ಲಿ ನೀರು ತುಂಬಿಸುವ ಯೋಜನೆಯ ಭಾಗವಾಗಿ ಎರಡು ಬಾರಿ ಗಂಗಾ ಪೂಜೆ ನೆರವೇರಿಸಿದ್ದೆ. ಹಲವು ವರ್ಷಗಳಿಂದ ಈ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಯುತ್ತಲೇ ಇದೆ. 2010ರಲ್ಲಿ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಏತ ನೀರಾವರಿ ಮೂಲಕ ನೀರು ತುಂಬಿಸುವ ಪ್ರಯತ್ನ ನಡೆಯಿತು. ನಂತರ 2012ರಲ್ಲಿ ಗುರುತ್ವಾಕರ್ಷಣೆ ಮೂಲಕ ನೀರು ತರುವ ಪ್ರಯತ್ನ ನಡೆಸಲಾಯಿತು. ಅದಾದ ನಂತರದಲ್ಲಿ ಬದಲಾಸ ಸರ್ಕಾರಗಳ ನಿರ್ಲಕ್ಷ್ಯದಿಂದ ಯೋಜನೆ ನೆನೆಗುದಿಗೆ ಬಿದ್ದಿತ್ತು’ ಎಂದು ಸಚಿವ ನಾಗೇಶ್ ಹೇಳಿದರು.
‘ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಬಳಿಕ ಯೋಜನೆಗೆ ಮತ್ತೆ ಜೀವ ಬಂದಿತು. ಬಿಜೆಪಿ ಸರ್ಕಾರ ಬಂದಾಗಲೆಲ್ಲ ಜನಗಳ ಆಶಯಕ್ಕೆ ತಕ್ಕಂತೆ ಅಭಿವೃದ್ಧಿ ಕೆಲಸಗಳು ಆಗುತ್ತವೆ. ಎಷ್ಟೇ ಕಷ್ಟಗಳು ಎದುರಾದರೂ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ನಿಲ್ಲಿಸುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲ ಮುಖ್ಯಮಂತ್ರಿಗಳ ಸಹಕಾರದಿಂದ ತಿಪಟೂರಿನ ಯೋಜನೆಗಳಿಗೆ ಅನುಕೂಲವಾಗಿದೆ’ ಎಂದು ಸಚಿವ ನಾಗೇಶ್ ನುಡಿದರು.
‘ದೀನ್ ದಯಾಳ್ ಉಪಾಧ್ಯಾಯ ಅವರ ಆಲೋಚನೆಯಂತೆ ಅಂತ್ಯೋದಯದ ಮೂಲಕ ಪರಿವರ್ತನೆಯಾಗಬೇಕು. ದೇಶದ ಕಟ್ಟ ಕಡೆಯ ಮನುಷ್ಯನ ಏಳಿಗೆಯಾಗಬೇಕು. ಪ್ರತಿಯೊಬ್ಬರಿಗೆ ಒಳಿತು ಮಾಡುವ ಮೂಲಕ ಸಮಾಜ, ದೇಶದ ಅಭಿವೃದ್ದಿಯಾಗಬೇಕು ಎಂದು ಉಪಾಧ್ಯಾಯ ಅವರು ಹೇಳುತ್ತಿದ್ದರು. ನಮ್ಮ ಬಿಜೆಪಿ ಸರ್ಕಾರ ಅದೇ ಧಿಕ್ಕಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

₹180 ಕೋಟಿ ವೆಚ್ಚದ ಕಾಮಗಾರಿಗೆ ಸಿಎಂ ಚಾಲನೆ 
‘ತಾಲೂಕಿನಲ್ಲಿ ಅಭಿವೃದ್ಧಿ ಪರ್ವ ಹೀಗೆಯೇ ಮುಂದುವರೆಯಲಿದ್ದು, ಇನ್ನುಳಿದ ಕೆರೆಗಳಿಗೆ ತುಂಬಿಸುವ 180 ಕೋಟಿ ರೂ. ವೆಚ್ಚದ ದೊಡ್ಡ ಯೋಜನೆ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಮುಖ್ಯಮಂತ್ರಿಗಳೇ ತಾಲೂಕಿಗೆ ಆಗಮಿಸಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ’ ಎಂದು ಸಚಿವ ನಾಗೇಶ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!