ಸಾಧನೆಗೆ ಇದು ಸಕಾಲ: .ರನ್ ವೇ ರೆಡಿ ಇದೆ, ನೀವು ಟೇಕಾಫ್ ಆಗಿ ಎಂದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ.ರನ್ ವೇ ರೆಡಿ ಇದೆ, ನೀವು ಟೇಕಾಫ್ ಆಗುವುದೊಂದೇ ಬಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಯುವಜನತೆಗೆ ಕರೆ ನೀಡಿದ್ದಾರೆ.

ಹುಬ್ಬಳ್ಳಿಯ ರೈಲ್ವೆ ರೈಲ್ವೆ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯುವಜನೋತ್ಸವದಲ್ಲಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇಲ್ಲಿ ಯಾರು ಗೆದ್ದರು ಎನ್ನುವುದು ಮಹತ್ವವಲ್ಲ. ಯಾರೇ ಗೆದ್ದರೂ ಭಾರತವೇ ಗೆಲ್ಲುತ್ತದೆ. ಎಲ್ಲ ಯುವಕರ ಸಾಮರ್ಥ್ಯ ಇಲ್ಲಿ ಹೊರಹೊಮ್ಮುತ್ತದೆ. ಪರಸ್ಪರ ಸ್ಪರ್ಧೆ ಮೂಲಕ ಸಹಕಾರ ಭಾವದಲ್ಲಿಯೂ ಕಾರ್ಯನಿರ್ವಹಿಸಬೇಕು. ನಮ್ಮ ಪ್ರತಿ ಗುರಿಯಲ್ಲೂ, ಇದರಿಂದ ದೇಶಕ್ಕೆ ಏನು ಲಾಭ ಎಂದು ಆಲೋಚಿಸಬೇಕು. ದೇಶವನ್ನು ಅಭಿವೃದ್ಧಿಯ ಗುರಿ ಮುಟ್ಟಿಸುವವರೆಗೆ ನಾವು ವಿರಮಿಸಬಾರದು. ಪ್ರತಿ ಯುವಕರೂ ಈ ಹೊಣೆಯನ್ನು ಹೊರುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಇಡೀ ವಿಶ್ವವೇ ಭಾರತವನ್ನು ಈಗ ನೋಡುತ್ತಿದೆ. ನಮ್ಮದು ಯುವ ದೇಶವಾಗಿದ್ದು ಮುಂದಿನ 25 ವರ್ಷದಲ್ಲಿ ಭಾರತವನ್ನು ಕಟ್ಟಬೇಕು. ವಿಶ್ವದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ನಿಮ್ಮ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ವಿವಿಧ ಕೌಶಲ್ಯಗಳನ್ನು ಕಲಿತು ನೀವು ಟೇಕಾಫ್‌ ಆಗಬೇಕು ಎಂದರು.

ನಾವು ವರ್ತಮಾನದಿಂದ ಹತ್ತು ಹೆಜ್ಜೆ ಮುಂದೆ ಯೋಚನೆ ಮಾಡಬೇಕು. ಯುವಕರ ಮುಂದಾಲೋಚನೆಯ ಮೂಲಕವೇ ಧನಾತ್ಮಕ ಬದಲಾವಣೆಗಳನ್ನು ತರಬೇಕು. ಇಂದು ನಮ್ಮ ಮುಂದಿರುವ ಅನೇಕ ವಿಚಾರಗಳು ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ತಿಳಿದೇ ಇರಲಿಲ್ಲ. ಈ ದಶಕ ಮುಗಿಯವ ವೇಳೆಗೆ ನಮ್ಮ ವಿಶ್ವವೇ ಬದಲಾಗುತ್ತದೆ. ಕೃತಕ ಬುದ್ಧಿಮತ್ತೆ, ಎಆರ್‌-ವಿಆರ್‌ ತಂತ್ರಜ್ಞಾನಗಳು, ದತ್ತಾಂಶ ವಿಜ್ಞಾನ, ಸೈಬರ್‌ ಭದ್ರತೆ ವಿಷಾರಗಳು ನಮ್ಮೆಲ್ಲ ಜೀವನದಲ್ಲಿ ಹೆಚ್ಚು ಜೋಡಿಸಿಕೊಂಡಿರುತ್ತದೆ ಎಂದರು.

ಯುವಕರು ಭವಿಷ್ಯದ ಉದ್ಯೋಗಕ್ಕೆ ಸಿದ್ಧವಾಗಬೇಕು. ಯಾರೂ ಮಾಡದ ಕೆಲಸವನ್ನೂ ನಾವು ಮಾಡಬೇಕಾಗುತ್ತದೆ. ಈ ಮನಃಸ್ಥಿತಿಯನ್ನು ಯುವಕರು ಮೂಡಿಸಿಕೊಳ್ಳಬೇಕು ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಶಾಲಾ ಮಟ್ಟದಿಂದಲೇ ಸಂಶೋಧನೆ ಹಾಗೂ ಕೌಶಲ್ಯಕ್ಕೆ ಒತ್ತು ನೀಡಲಾಗುತ್ತಿದೆ. ಆಯ್ಕೆಗಳ ಮೂಲಕ ಮುನ್ನಡೆಯುವ ಸ್ವಾತಂತ್ರ್ಯ ಈ ಶಿಕ್ಷಣ ವ್ಯವಸ್ಥೆಯಲ್ಲಿದೆ. ಭವಿಷ್ಯಕ್ಕೆ ಸಿದ್ಧವಾದ ಯುವಕರನ್ನು ನಾವು ರೂಪಿಸುತ್ತಿದ್ದೇವೆ ಎಂದರು.

ದೇಶದಲ್ಲಿ ಡಿಜಿಟಲ್‌ ಪೇಮೆಂಟ್‌, ಸ್ವಚ್ಛ ಭಾರತ್‌, ಜನಧನ ಖಾತೆ, ಸ್ವದೇಶಿ ಲಸಿಕೆ ತಂದಾಗ ಅನೇಕರು ಅಪಹಾಸ್ಯ ಮಾಡಿದರು. ಭಾರತದಲ್ಲಿ ಡಿಜಿಟಲ್‌ ಆರ್ಥಿಕತೆ ಸಫಲವಾಗದು ಎಂದರು. ಈ ಲಸಿಕೆ ಕೆಲಸ ಮಾಡುತ್ತದೆಯೇ ಎಂದು ಅನುಮಾನಿಸಿದರು. ಆದರೆ ಇಂದು ಡಿಜಿಟಲ್‌ ಆರ್ಥಿಕತೆಯಲ್ಲಿ ಭಾರತವೇ ಮುಂಚೂಣಿಯಲ್ಲಿದೆ. ನಿಮ್ಮ ಆಲೋಚನೆಯ ಮೇಲೆ ವಿಶ್ವಾಸ ಇದ್ದರೆ ಅದಕ್ಕೆ ಬದ್ಧವಾಗಿರಿ. ನಿಮ್ಮನ್ನು ಅಪಹಾಸ್ಯ ಮಾಡುವವರನ್ನು ಅದು ಮೆಟ್ಟಿ ನಿಲ್ಲುತ್ತದೆ ಎಂದು ಯುವಕರಿಗೆ ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!