3,000 ಖಗ-ಮೃಗಗಳ ನೀರ ನೆಮ್ಮದಿಗೆ ಕಾರಣವಾಯ್ತು ಈ ಹೊಸ ಉಪಕ್ರಮ

– ಸಿ.ಎಸ್.ಅರಸನಾಳ

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಸಿಕೊಳ್ಳುವ ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ಬೇಸಿಗೆಯಲ್ಲಿ ಬೆಂಕಿಯ ಕಾಟ ಒಂದೆಡೆಯಾದರೆ, ಕಪ್ಪತಗುಡ್ಡದಲ್ಲಿ ನೀರಿನ ಮೂಲಗಳು ಬತ್ತಿ ಹೋಗಿದ್ದರಿಂದ ಇಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದೆ ಪರಿತಪಿಸುತ್ತಿರುವುದು ವಿಷಾದವಾಗಿದೆ.

ಆದರೆ, ಕಳೆದ ಅನೇಕ ವರ್ಷಗಳಿಂದ ಕಪ್ಪತಹಿಲ್ಸ್ ಅರಣ್ಯ ಇಲಾಖೆ ಕೃತಕ ಹೊಂಡಗಳನ್ನು ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.

ಕಪ್ಪತಗುಡ್ಡ ತನ್ನ ಒಡಲಲ್ಲಿ 30 ಕ್ಕೂ ಹೆಚ್ಚು ಕೆರೆ, ಹಳ್ಳ-ಕೊಳ್ಳ ಮತ್ತು ಬಾಂದಾರ ಹೊಂದಿದೆ. ಎಲ್ಲವೂ ಹೂಳು ತುಂಬಿಕೊಂಡು ನೀರು ನಿಲ್ಲದಂತಾಗಿವೆ. ಮಳೆಗಾಲದಲ್ಲಿ ಸ್ವಲ್ಪ ನೀರು ನಿಂತು ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ದಾಹ ಹಿಂಗಿಸುತ್ತಿವೆ. ಆದರೆ ಬೇಸಿಗೆ ಬಂದಾಗ ಈ ಕೆರೆಗಳು ಬತ್ತಿ ಹೋಗುವುದರಿಂದ ಪ್ರಾಣಿ-ಪಕ್ಷಿಗಳು ನೀರನ್ನು ಹುಡುಕಿಕೊಂಡು ನಾಡನ್ನು ಪ್ರವೇಶಿಸುವುದು ಸಾಮಾನ್ಯ ಸಂಗತಿ.

ಆದರೆ, ಕಪ್ಪತಗುಡ್ಡದಲ್ಲಿ ಇರುವ ಪ್ರಾಣಿ ಪಕ್ಷಿಗಳಿಗೆ ಅನಕೂಲವಾಗಲೆಂದು ಅರಣ್ಯ ಇಲಾಖೆ ಕಪ್ಪತಗುಡ್ಡದ ಅನೇಕ ಪ್ರದೇಶದಲ್ಲಿ ಕೃತ ಹೊಂಡವನ್ನು ನಿರ್ಮಿಸಿ ಪ್ರಾಣಿ ಪಕ್ಷಗಳ ಕುಡಿಯುವ ನೀರಿನ ದಾಹ ತಣಿಸುತ್ತಿರುವುದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಈಗ ಕಪ್ಪತಗುಡ್ಡದ ಶಿರಹಟ್ಟಿ ಅರಣ್ಯ ವ್ಯಾಪ್ತಿಯ ಕಡಕೋಳ, ಇರಬೆಂಚಿ ಕೊಳ್ಳ, ಕರಡಡಿ ಕೊಳ್ಳ, ಮಜ್ಜೂರ ಪ್ರದೇಶ ಮತ್ತು ಮುಂಡರಗಿ ತಾಲೂಕಿನ ಹಾರೋಗೇರಿರ, ಕಲಕೇರಿ, ಡೋಣಿ, ಹಿರೇವಡ್ಡಟ್ಟಿ, ಕೆಲೂರು, ಮುರಡಿ, ಹಮ್ಮಗಿ ಗ್ರಾಮಗಳ ವ್ಯಾಪ್ತಿಯ ಕಪ್ಪತಗುಡ್ಡದಲ್ಲಿ ಕೃತಕ ನೀರಿನ ಹೊಂಡ ನಿರ್ಮಿಸಲಾಗಿದೆ. ಈ ಹೊಂಡಗಳಿಗೆ 15 ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುವುದು. ದೊಡ್ಡದಾದ ಗುಂಡಿ ತೋಡಿ, ಅದಕ್ಕೆ ಪ್ಲಾಸ್ಟಿಕ್ ಹಾಳೆ ಹೊದಿಸಿ ಅದರಲ್ಲಿ ನೀರನ್ನು ಶೇಖರಿಸಲಾಗುತ್ತಿದೆ.

ಇದರಿಂದ ನೀರು ಇಂಗದೆ ಕೆಲವು ದಿನ ಪ್ರಾಣಿ ಪಕ್ಷಿಗಳಿಗೆ ಅನಕೂಲವಾಗುತ್ತದೆ. ಕಪ್ಪತಗುಡ್ಡದಲ್ಲಿ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿನ ನೀರನ್ನು ಪ್ರಾಣಿಗಳು ನೀರನ್ನು ಕುಡಿಯುವ ದೃಶ್ಯಗಳನ್ನು ಸಮೀಪದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ದಾಖಲಿಸಲಾಗಿದೆ.

ಕಪ್ಪತಗುಡ್ಡದಲ್ಲಿರುವ ಪ್ರಾಣಿಗಳು

2005-06 ನೇ ಸಾಲಿನ ಗಣತಿಯ ಪ್ರಕಾರ 317 ಕೃಷ್ಣಮೃಗ, 66 ಕಾಡುಕೊಳಿ, 35 ಚುಕ್ಕೆಜಿಂಕೆ, 165 ಮುಳ್ಳ ಹಂದಿ, 295 ಕಾಡುಹಂದಿ, 4 ಚಿರತೆ, 4 ಕರಡಿ, 40 ತೋಳ, 85 ನರಿ, 12 ಕತ್ತೆಕಿರಬ, 13 ಕಾಡು ಬೆಕ್ಕುಗಳು, ಮೊಲಗಳು ಮತ್ತು 255 ವಿವಿಧ ತರಹದ ಪಕ್ಷಿಗಳು, ಹಾಗೆಯೇ ಸರ್ಪಗಳಾದ ನಾಗರಹಾವು,ರಸೆಲ್ಸ, ವಾಯಿಪರ್, ಕೇರೆ ಹಾವು, ಹೆಬ್ಬಾವು ಕಂಡುಬರುತ್ತವೆ. 2013ರಲ್ಲಿ ನಡೆದ ಅಂದಾಜು ಪಟ್ಟಿಯಲ್ಲಿಯೂ ಈ ಎಲ್ಲ ಪ್ರಾಣಿಗಳು ಇರುವುದಾಗಿ ಉಲ್ಲೇಖವಿದೆ.

ಪಾರಿವಾಳ, ಗುಬ್ಬಿ, ಗಿಳಿ,ಲಿಟಲ್ ಎಗ್ಗರೆಟ್, ಕೆಟಲ್ ಎಗ್ಗರೇಟ್, ದೊಡ್ಡ ಎಗ್ಗರೇಟ್, 2000 ಕ್ಕೂ ಹೆಚ್ಚು ನವಿಲುಗಳು ಇರುವುದು ತಿಳಿದು ಬರುತ್ತದೆ. ಈಗ 10 ಚಿರತೆಗಳು ಕಪ್ಪತಗುಡ್ಡದಲ್ಲಿ ಇವೆ ಎನ್ನುವುದು ತಿಳಿದುಬಂದಿದೆ.

“ಕಪ್ಪತಗುಡ್ಡದಲ್ಲಿ ವನ್ಯಜೀವಿಗಳಿಗೆ ಬೇಸಿಗೆಯಲ್ಲಿ ನೀರಿನ ದಾಹ ಇಂಗಿಸಲು 25 ಕ್ಕೂ ಹೆಚ್ಚು ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ಪ್ರಾಣಿ ಪಕ್ಷಿಗಳಿಗೆ ನಿತ್ಯವೂ ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿವೆ.” ಎಂದು ಕಪ್ಪತಹಿಲ್ಸ್ ವಲಯ ಅರಣ್ಯಾಕಾರಿ ವೀರೇಂದ್ರ ಮರಿಬಸಣ್ಣವರ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!