ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ನಟಿ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ದೂರಾಗಿ ಹಲವು ವರ್ಷಗಳೇ ಕಳೆದಿದ್ದು, ಇದಾದ ಬಳಿಕ ನಾಗಚೈತನ್ಯ ತಮ್ಮ ಹೊಸ ಗೆಳತಿ ಶೋಭನಾ ಧೂಲಿಪಲ್ಲ ಜೊತೆ ಮತ್ತೊಂದು ಮದುವೆಗೂ ಸಿದ್ಧರಾಗಿದ್ದಾರೆ.
ಹೀಗಿರುವಾಗ ತೆಲಂಗಾಣದ ಸಚಿವೆಯೊಬ್ಬರು ಇವರ ವಿಚ್ಛೇದನಕ್ಕೆ ರಾಜಕೀಯ ನಾಯಕರೊಬ್ಬರು ಕಾರಣರಾದರು ಎಂಬ ಹೊಸ ಆರೋಪ ಮಾಡಿದ್ದು, ಇದು ಈಗ ತೆಲಂಗಾಣದ ರಾಜಕಾರಣ ಹಾಗೂ ಸಿನಿಮಾ ರಂಗದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ತೆಲಂಗಾಣದ ರಾಜಕೀಯ ನಾಯಕ ಹಾಗೂ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರೇ ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರ ವಿಚ್ಛೇದನಕ್ಕೆ ಕಾರಣ ಎಂದು ತೆಲಂಗಾಣದ ಸಚಿವೆ ಕೊಂಡ ಸುರೇಖಾ ಅವರು ಇಂದು ಆರೋಪ ಮಾಡಿದ್ದು, ಇದು ತೀವ್ರ ವಿವಾದ ಸೃಷ್ಟಿಸಿದೆ.
ಮಾಧ್ಯಮವೊಂದರಲ್ಲಿ ಮಾತನಾಡುತ್ತಾ, ಕೇವಲ ಸಮಂತಾ ಮಾತ್ರವಲ್ಲ, ಕೆಟಿಆರ್ ಅವರ ಹಾವಳಿಯಿಂದಾಗಿ ಅನೇಕ ನಟಿಯರು ಬೇಗ ಬೇಗ ಮದುವೆಯಾದರು ಎಂದು ದೂರಿದ್ದಾರೆ. ಅವರು ಡ್ರಗ್ಸ್ ತೆಗೆಕೊಳ್ಳುತ್ತಾರೆ ಹಾಗೂ ಅವರು ರೇವ್ ಪಾರ್ಟಿಗಳನ್ನು ಆಯೋಜಿಸಿ ನಟಿಯರ ಭಾವನೆಗಳ ಜೊತೆ ಆಟವಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸಮಂತಾ ನಾಗಚೈತನ್ಯ ವಿಚ್ಛೇದನಕ್ಕೆ ಕೆಟಿಆರ್ ಅವರೇ ಶೇಕಡಾ 100ರಷ್ಟು ನೇರ ಕಾರಣೀಕರ್ತರು, ನಾಗಾರ್ಜುನ್ ಅವರಿಗೆ ಸೇರಿದ ನಾಗಾರ್ಜುನ ಕನ್‌ವೆನ್ಷನ್ ಸೆಂಟರ್‌ನ್ನು ಡೆಮಾಲಿಸ್ ಮಾಡದೇ ಇರುವುದಕ್ಕೆ ಪ್ರತಿಯಾಗಿ ಸೊಸೆ ಸಮಂತಾರನ್ನು ತನ್ನ ಬಳಿ ಕಳುಹಿಸುವಂತೆ ಕೇಳಿದ್ದರು. ಆದರೆ ಸಮಂತಾ ಇದಕ್ಕೆ ನಿರಾಕರಿಸಿದರು. ಹೀಗಾಗಿ ನಾಗಾರ್ಜುನ ಕುಟುಂಬದವರು ಆಕೆಯನ್ನು ಬಿಟ್ಟು ಹೋಗುವಂತೆ ಹೇಳಿದರು. ಹೀಗಾಗಿ ದಂಪತಿ ಮಧ್ಯೆ ವಿಚ್ಚೇದನವಾಯ್ತು ಎಂದು ಸುರೇಖಾ ಆರೋಪಿಸಿದ್ದಾರೆ.
ಇತ್ತ ಸುರೇಖಾ ಆರೋಪಕ್ಕೆ ಕೆಟಿಆರ್ ರಾವ್ ಪ್ರತಿಕ್ರಿಯಿಸಿದ್ದು, ಸುರೇಖಾ ಅವರು ಈ ಹಿಂದೆಯೂ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿದ್ದರು. ತಾನು ಟಾಲಿವುಡ್ ಹಿರೋಯಿನ್‌ಗಳ ಫೋನ್ ಕದ್ದಾಲಿಕೆ ಮಾಡಿದ್ದೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು.
ನನಗೆ ಮನೆಯಲ್ಲಿ ಹೆಂಡತಿ ಮಕ್ಕಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇಂತಹ ವ್ಯಕ್ತಿಗಳು ಈ ರೀತಿ ಆರೋಪ ಮಾಡಿದರೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಸುರೇಖಾ ಯೋಚನೆ ಮಾಡಲಿ. ಇಂತಹ ಸುಳ್ಳು ಆಕ್ಷೇಪಾರ್ಹ ಆರೋಪಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇತ್ತ ಸುರೇಖಾ ಅವರ ಆರೋಪವನ್ನು ನಟ ಅಕ್ಕಿನೇನಿ ನಾಗಾರ್ಜುನ್ ಅವರು ಕೂಡ ಖಂಡಿಸಿದ್ದಾರೆ. ಗೌರವಾನ್ವಿತ ಸಚಿವೆ ಸುರೇಖಾ ಕೊಂಡ ಅವರ ಆರೋಪವನ್ನು ನಾನು ತುಂಬಾ ಧೃಡವಾಗಿ ಖಂಡಿಸುತ್ತೇನೆ. ನಿಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸುವುದಕ್ಕೆ ಸಿನಿಮಾ ನಟರ ಬದುಕನ್ನು ಬಳಸಿಕೊಳ್ಳಬೇಡಿ, ಬೇರೆಯವರ ವೈಯಕ್ತಿಕ ಜೀವನವನ್ನು ಗೌರವಿಸಿ ಎಂದು ನಾಗಾರ್ಜುನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದು ಜವಾಬ್ದಾರಿಯುತ ಹುದ್ದೆಯಲ್ಲಿರುವ ಮಹಿಳೆಯಾಗಿ ನೀವು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳಾಗಿದ್ದು, ನಮ್ಮ ಕುಟುಂಬಕ್ಕೂ ಇದಕ್ಕೂ ಸಂಬಂಧವಿಲ್ಲ ಹೀಗಾಗಿ ನೀವು ಈ ಕೂಡಲೇ ನಿಮ್ಮ ಮಾತುಗಳನ್ನು ಹಿಂಪಡೆಯಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ನಾಗಾರ್ಜುನ್ ಅವರು ಆಗ್ರಹಿಸಿದ್ದಾರೆ.