ಈ ಬಾರಿ ಬಿಜೆಪಿ 150 ಸ್ಥಾನಗಳ ಗೆದ್ದು, ಬಹುಮತದೊಂದಿಗೆ ಸರ್ಕಾರ ರಚಿಸುವುದು ನಿಶ್ಚಿತ: ಡಾ.ಅಶ್ವತ್ಥನಾರಾಯಣ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೃಷಿ, ಮೂಲಸೌಕರ್ಯ, ಕೈಗಾರಿಕೆ ಸೇರಿದಂತೆ ಎಲ್ಲ ವಲಯಗಳಿಗೆ ಕೇಂದ್ರ ಮತ್ತು ರಾಜ್ಯದಲ್ಲಿನ ಡಬಲ್ ಇಂಜಿನ್ ಸರ್ಕಾರ ಒತ್ತು ನೀಡಿರುವುದರಿಂದ ಜನರು ಬಿಜೆಪಿ ಪರವಾಗಿ ನಿಂತಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಲಾಗುತ್ತಿದೆ. ಡಿಜಿಟಲ್ ವ್ಯವಸ್ಥೆ, ಕೃತಕ ಬುದ್ಧಿಮತ್ತೆ, ಆವಿಷ್ಕಾರ ವಲಯಗಳು ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿವೆ. ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಭೂಕಂದಾಯ ಕಾಯ್ದೆ ಜಾರಿಗೆ ತರಲಾಗಿದೆ. ಇದರಿಂದ ಕೈಗಾರಿಕೆಗಳಲ್ಲಿ ಕಾನೂನಿನಂತೆ ಜಮೀನು ಖರೀದಿಸಬಹುದಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ. ಪ್ರತಿಭೆ ಮತ್ತು ಕೌಶಲ್ಯಾಭಿವೃದ್ಧಿ ನೀತಿಯ ಪ್ರಮುಖ ಅಂಶಗಳಾಗಿವೆ ಎಂದು ವಿವರಿಸಿದರು.

ಕರ್ನಾಟಕವನ್ನು ಜ್ಞಾನಾಧಾರಿತ ಮತ್ತು ಆವಿಷ್ಕಾರದ ರಾಜ್ಯವನ್ನಾಗಿಸಲು ಡಬಲ್ ಇಂಜಿನ್ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯ ಹೆಚ್ಚಿಸಲಾಗಿದ್ದು, ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಇಡೀ ದೇಶದಲ್ಲೇ ಕರ್ನಾಟಕಕ್ಕೆ ಅಧಿಕ ವಿದೇಶಿ ನೇರ ಬಂಡವಾಳ ಹರಿದು ಬರುತ್ತಿದೆ ಎಂದು ಹೇಳಿದರು.

ಬೆಂಗಳೂರು ನಗರಕ್ಕೆ ನೀರಿನ ಕೊರತೆಯಾಗದಂತೆ ಇನ್ನೂ 735 ಎಂ.ಎಲ್.ಡಿ ನೀರು ಪೂರೈಕೆಯ ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ತಿಳಿಸಿದರು.

ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮನೆ-ಮನೆಗೆ ಭೇಟಿ ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ತಿಳಿಸುತ್ತಿದ್ದಾರೆ. ಈ ಬಾರಿ ಬಿಜೆಪಿ 150 ಸ್ಥಾನಗಳನ್ನು ಗೆದ್ದು, ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸುವುದು ನಿಶ್ಚಿತ ಎಂದು ಹೇಳಿದರು.

ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದರಾದ ಯು.ಡಿ.ಶರ್ಮಾ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನಾಯಕತ್ವದಲ್ಲಿ ದೇಶದ ಮೂಲೆ, ಮೂಲೆಯೂ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಅನ್ವರ್ಥನಾಮವಾಗಿದೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್, ಉತ್ತರ ಜಿಲ್ಲಾ ಅಧ್ಯಕ್ಷ ನಾರಾಯಣ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!