spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಳಸಿದ ಅಡುಗೆ ಎಣ್ಣೆಯನ್ನು ಬಯೋಡೀಸೆಲ್ ಮಾಡಲಿದೆ ಕಾಸರಗೋಡಿನ ಈ ಘಟಕ!

- Advertisement -Nitte

ಹೊಸ ದಿಗಂತ ವರದಿ, ಕಾಸರಗೋಡು:

ಅಡುಗೆಯಲ್ಲಿ ಬಳಸಿದ ಎಣ್ಣೆಯ ಮರುಬಳಕೆ ಸಂಬಂಧ ಇನ್ನು ಮುಂದೆ ಆತಂಕ ಬೇಕಿಲ್ಲ. ಅಡುಗೆ ಎಣ್ಣೆಯನ್ನು ಬಯೋಡೀಸೆಲ್ (ಬಯೋಗ್ಯಾಸ್) ಆಗಿ ಪರಿವರ್ತಿಸುವ ಕೇರಳ ರಾಜ್ಯದ ಪ್ರಪ್ರಥಮ ಘಟಕವು ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪನೆಗೊಳ್ಳಲಿದೆ.
ಕುಂಬಳೆ ಬಳಿಯ ಅನಂತಪುರದ ಕೈಗಾರಿಕೆ ಉದ್ಯಾನದಲ್ಲಿ ಕೈಗಾರಿಕೆ ಇಲಾಖೆಯು ಮಂಜೂರು ಮಾಡಿದ 2 ಎಕ್ರೆ ಜಾಗದಲ್ಲಿ ಪ್ರತಿ ತಿಂಗಳು 500 ಟನ್ ಬಯೋಡೀಸೆಲ್ ಉತ್ಪಾದಿಸುವ ಸಾಮರ್ಥ್ಯದ ಕಾರ್ಖಾನೆಯ ನಿರ್ಮಾಣವನ್ನು ಆರಂಭಿಸಲಾಗಿದೆ. ಬ್ರಿಟಿಷ್ ವಂಶಜ ಕಾರ್ಲ್ ವಿಲಿಯಮ್ಸ್ ಫೀಲ್ಡನ್ ಅವರ ಮಾಲೀಕತ್ವದ ನ್ಯೂಟ್ರನ್ ಫ್ಯೂವೆಲ್ಸ್ , ಕಲ್ಲಿಕೋಟೆ ನಿವಾಸಿ ಹಕ್ಸರ್ ಆಡಳಿತ ನಿರ್ದೇಶಕರಾಗಿರುವ ಖತಾರ್ ಪ್ರಧಾನ ಕೇಂದ್ರವಾಗಿರುವ ಎರ್ಗೋ ಬಯೋ ಫ್ಯೂವೆಲ್ಸ್ ಪ್ರೈವೇಟ್ ಲಿಮಿಟೆಡ್ ಇವುಗಳು ಜಂಟಿಯಾಗಿ ಈ ಘಟಕವನ್ನು ಸ್ಥಾಪಿಸುತ್ತಿವೆ.
ಮನೆ, ಬೇಕರಿ, ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಕಡೆಗಳಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ ಬಯೋಡೀಸೆಲ್ ಉತ್ಪಾದಿಸಲಾಗುವುದು. ದುಬಾಯಿ, ಅಬುದಾಬಿ, ಬೆಹರೈನ್, ಒಮಾನ್, ಖತಾರ್, ಟೂನೇಷ್ಯಾ , ಮಲೇಷ್ಯಾ ಮುಂತಾದ ಕಡೆಗಳಲ್ಲಿ ಎರ್ಗೋ ಬಯೋ ಡೀಸೆಲ್ ಉತ್ಪಾದಿಸುವ ಕಂಪೆನಿ ಇದಾಗಿದೆ. ಒಮಾನ್ ನಲ್ಲಿ ಈ ಉಭಯ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಿಸುತ್ತಿವೆ. ಕೇರಳದಲ್ಲಿ ಈ ಸಂಸ್ಥೆಗಳ ಕಂಪೆನಿ ಆರಂಭಿಸುವ ನಿಟ್ಟಿನಲ್ಲಿ ಕೇರಳ ಕೈಗಾರಿಕಾ ಖಾತೆ ಸಚಿವ ಪಿ.ರಾಜೀವ್ ಉತ್ತಮ ರೀತಿ ಸ್ಪಂದಿಸಿದ ಪರಿಣಾಮ ಕಾಸರಗೋಡಿನಲ್ಲಿ ಕಾರ್ಖಾನೆ ಸ್ಥಾಪನೆಗೊಳ್ಳುತ್ತಿದೆ.
35 ಲಕ್ಷ ಜನಸಂಖ್ಯೆಯಿರುವ ಖತಾರ್ ನಲ್ಲಿ ಪ್ರತಿ ತಿಂಗಳು 500 ಟನ್ ಬಯೋಡೀಸೆಲ್ ಉತ್ಪಾದಿಸುತ್ತಿರುವ ವೇಳೆ ಅದರ ಎರಡು ಪಟ್ಟು ಜನಸಂಖ್ಯೆಯಿರುವ ಕೇರಳದಲ್ಲಿ ಅವಶೇಷವಾಗಿ ಸಿಗುವ ಅಡುಗೆ ಎಣ್ಣೆ ಸಂಗ್ರಹಿಸಿದರೆ ಈ ಗಣನೆಯ ಹತ್ತು ಪಟ್ಟು ಬಯೋಗ್ಯಾಸ್ ಉತ್ಪಾದಿಸಬಹುದು ಎಂದು ಎರ್ಗೋ ಫ್ಯೂವೆಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಹಕ್ಸರ್ ಅಭಿಪ್ರಾಯಪಡುತ್ತಾರೆ. ಪ್ರಸ್ತುತ ಕೇರಳದಲ್ಲಿ ಅಧಿಕೃತವಾಗಿ ಎಣ್ಣೆ ಸಂಗ್ರಹಿಸಿ ಪರಿಷ್ಕರಿಸಿ ಮರುಬಳಕೆಗೆ ಮನೆಗಳಿಗೆ ತಲುಪಿಸಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ 60ರಿಂದ 70 ರೂ. ಪಡೆದು ತದನಂತರ ಅದಕ್ಕಿಂತ ದುಪ್ಪಟ್ಟು ಬೆಲೆಗೆ ನೂತನ ರೂಪದಲ್ಲಿ , ವಿವಿಧ ಹೆಸರುಗಳಲ್ಲಿ ಸಾರ್ವಜನಿಕವಾಗಿ ವಿತರಿಸಲಾಗುತ್ತಿದೆ. ಈ ಎಣ್ಣೆಯ ಮರುಬಳಕೆಯ ಪರಿಣಾಮ ಚರ್ಮರೋಗ, ಕ್ಯಾನ್ಸರ್ ನಂತಹ ಕಾಯಿಲೆಗಳ ಸಾಧ್ಯತೆ ಅಧಿಕವಾಗಿದೆ. ಇದನ್ನು ಈ ಮೂಲಕ ತಡೆಯುವ ಸಾಧ್ಯತೆಯಿದೆ ಎಂದು ಹಕ್ಸರ್ ತಿಳಿಸುತ್ತಾರೆ.
ಬಯೋಡೀಸೆಲ್ ಬಳಸಿ ಎಲ್ಲ ರೀತಿಯ ಡೀಸೆಲ್ ಇಂಜಿನ್ ಗಳ ಚಟುವಟಿಕೆ ಸಾಧ್ಯವಿದೆ ಎಂದು ಕಾರ್ಲ್ ವಿಲ್ಯಮ್ಸ್ ತಿಳಿಸುತ್ತಾರೆ. ಯುರೋಪ್ ದೇಶಗಳಲ್ಲಿ ಬಯೋ ಡೀಸೆಲ್ ವಿಸ್ತೃತವಾಗಿ ಬಳಕೆಯಲ್ಲಿದೆ. ವಾಹನ ಇಂಜಿನ್ ಗಳ ಸಾಮರ್ಥ್ಯ ಹೆಚ್ಚಿಸಲು ಬಯೋ ಡೀಸೆಲ್ ಗೆ ಸಾಧ್ಯವಾಗುತ್ತದೆ ಎಂದು ವೈಜ್ಞಾನಿಕವಾಗಿ ಖಚಿತಗೊಂಡಿದೆ. ಕಡಿಮೆ ಬೆಲೆಯಲ್ಲಿ ಈ ಡೀಸೆಲ್ ಮಾರುಕಟ್ಟೆಯಲ್ಲಿ ಲಭಿಸಲಿದೆ.
ಇದೇ ವೇಳೆ ಫೀಲ್ಡನ್ ಅವರ ನೇತೃತ್ವದ ಕಂಪೆನಿ ಪ್ರತಿನಿಧಿಗಳು ಅನಂತಪುರಕ್ಕೆ ಆಗಮಿಸಿ ಘಟಕದ ನಿರ್ಮಾಣ ಚಟುವಟಿಕೆಗಳ ಅವಲೋಕನ ನಡೆಸಿದರು. ಡಿಸೆಂಬರ್ ತಿಂಗಳ ವೇಳೆಗೆ ಕಾರ್ಖಾನೆ ಕಾರ್ಯಾರಂಭದ ನಿರೀಕ್ಷೆಯಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ, ತಮಿಳುನಾಡಿನಿಂದಲೂ ಬಳಸಿದ ಅಡುಗೆ ಎಣ್ಣೆ ಸಂಗ್ರಹಿಸಲು ಕಂಪೆನಿ ಉದ್ದೇಶಿಸಿದೆ. ಕುಟುಂಬಶ್ರೀ ಮತ್ತು ಹರಿತ ಕ್ರಿಯಾ ಸೇನೆಗಳ ಕಾರ್ಯಕರ್ತರನ್ನು ಈ ನಿಟ್ಟಿನಲ್ಲಿ ಬಳಸಲಾಗುವುದು. ಈ ಮೂಲಕ ಅವರಿಗೂ ಕಾರ್ಖಾನೆಯಲ್ಲಿ ಉದ್ಯೋಗ ಸಾಧ್ಯತೆಯಿದೆ. ಇಂಡಿಯನ್ ಆಯಿಲ್ ಸಂಸ್ಥೆಯೊಂದಿಗಿನ ಕರಾರಿನಲ್ಲಿ ಅಳವಡಿಸಿ ಬಯೋ ಡೀಸೆಲ್ ಮಾರುಕಟ್ಟೆಗೆ ಬರಲಿದೆ. ಅನಂತಪುರಕ್ಕೆ ಆಗಮಿಸಿದ್ದ ಕಂಪೆನಿ ಪ್ರತಿನಿಧಿಗಳು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಈ ನೂತನ ಕೈಗಾರಿಕೆಗೆ ಎಲ್ಲ ರೀತಿಯ ಸಹಕಾರ ಒದಗಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ಪ್ರಬಂಧಕ ಕೆ.ಸಜಿತ್ ಕುಮಾರ್, ಹಾಗೂ ಕೈಗಾರಿಕೆ ಇಲಾಖೆಯ ಸಿಬ್ಬಂದಿಗಳು ಜೊತೆಗಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss