ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಠಿಣ ಶ್ರಮ, ಇಚ್ಛಾಶಕ್ತಿ, ಸ್ಪಷ್ಟ ಗುರಿ ಇದ್ದಲ್ಲಿ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಉತ್ತರ ಪ್ರದೇಶದ ಈ ವೈಷ್ಣವಿ ಪೌಲ್!
ನಾಲ್ಕು ಬಾರಿಯ ಸತತ ಸೋಲನ್ನೂ ಮೆಟ್ಟಿ ನಿಂತ ಈಕೆ ತಮ್ಮ 26ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ 2022ರಲ್ಲಿ 62ನೇ ರ್ಯಾಂಕ್ ಗಳಿಸಿ ಗೆಲುವಿನ ನಗೆ ಬೀರಿದ್ದಾರೆ.
ಉತ್ತರ ಪ್ರದೇಶದ ಗೊಂಡಾ ಮೂಲದ 26 ಈ ಹುಡುಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯ ವೈಖರಿ ಕಂಡು ತಾನೂ ಐಎಎಸ್ ಆಗಬೇಕೆಂಬ ಕನಸು ಕಂಡಿದ್ದರು. ಗೊಂಡಾದ ಫಾತಿಮಾ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ವೈಷ್ಣವಿ, ಬಳಿಕ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದು, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.
ಯುಪಿಎಸ್‌ಸಿಯ ತನ್ನ ಮೊದಲ ಪ್ರಯತ್ನವಾಗಿ ಪರೀಕ್ಷೆಯಲ್ಲಿ ತೇರ್ಗಡೆಯಾದರೂ, ಮೇನ್ಸ್‌ನಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಅದೇ ರೀತಿ ಒಂದಲ್ಲ ಎರಡಲ್ಲ, ಮೂರು ಬಾರಿ ಸೋಲನ್ನೇ ಕಂಡರು. ಆದರೆ ಹಠ ಬಿಡದ ವೈಷ್ಣವಿ, ಪ್ರಿಲಿಮ್ಸ್ ಮತ್ತು ಮೇನ್ಸ್ ಎರಡನ್ನೂ ಯಶಸ್ವಿಯಾಗಿ ಪಾಸ್ ಮಾಡಿದರು. ಆದರೆ ಮತ್ತೆ ಗೆಲುವು ಮುಂದಿನ ಇಂಟರ್‌ವ್ಯೂನಲ್ಲಿ ಸಾಥ್ ನೀಡಲಿಲ್ಲ. ಛಲಬಿಡದ ವೈಷ್ಣವಿ, ಇದನ್ನು ಸವಾಲಾಗಿ ಸ್ವೀಕರಿಸಿ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸ್ ಮಾಡಿ ಈಗ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರ ಸಾಧನೆ ಒಂದೆರಡು ಸೋಲಿನಲ್ಲಿಯೇ ಕಂಗೆಡುವ ಹಲವು ಅಭ್ಯರ್ಥಿಗಳಿಗೆ ಸ್ಪೂರ್ತಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ