ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ, ಚಿಕ್ಕಮಗಳೂರು:
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸ್ವಂತ ತಮ್ಮನೇ ತನ್ನ ಅಣ್ಣನನ್ನು ಕೊಲೆ ಮಾಡಿದ್ದು, ಕೊಲೆಗೀಡಾದಾತ ಕೊರೋನಾ ಸೊಂಕಿನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ.
ಕಳಸ ತಾಲ್ಲೂಕು ಮರಸಣಿಗೆ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಕಂಬಳಗದ್ದೆಯ ಮಹಾವೀರ (45) ಎಂಬಾತ ಕೊಲೆಗೀಡಾಗಿದ್ದು, ಚಂದ್ರಮತಿ ಮತ್ತು ಅನಂತರಾಜಯ್ಯ ದಂಪತಿಗಳ ಪುತನಾಗಿದ್ದಾನೆ.
ಆತನ ಕಿರಿಯ ಸಹೋದರ ಪಾರ್ಶ್ವನಾಥ(34) ಕೊಲೆ ಆರೋಪಿಯಾಗಿದ್ದು, ಈ ಕುಟುಂಬಕ್ಕೆ 8 ಎಕರೆ ಜಮೀನು ಇದ್ದು ಆಸ್ತಿ ವಿಚಾರವಾಗಿ ಪುತ್ರರಿಬ್ಬರ ನಡುವೆ ಕಲಹ ನಡೆಯುತ್ತಲೇ ಇತ್ತು ಎಂದು ತಾಯಿ ಚಂದ್ರಮತಿ ಕಳಸ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿದ್ದ ಮಹಾವೀರನನ್ನು ಮೂಡಿಗೆರೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಶನಿವಾರ ಸಂಜೆ ಮರಸಣಿಗೆಗೆ ಕರೆತರಲಾಗಿತ್ತು. ಆತ ಮನೆಯ ಜಗುಲಿಯಲ್ಲಿ ಮಲಗಿದ್ದ. ರಾತ್ರಿ ಆರೋಪಿ ಪಾರ್ಶ್ವನಾಥ ಮಹಾವೀರನ ಮುಖ ಮತ್ತು ತಲೆಗೆ ಕತ್ತಿಯಿಂದ ಕಡಿದಿದ್ದಾನೆ. ತಾಯಿ ಅಡ್ಡ ಬಂದರೂ ಬಿಡದೆ ಅಲ್ಲೇ
ಕೊಡಲಿಯನ್ನೂ ತೆಗೆದುಕೊಂಡು ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾವೀರ ಅವರನ್ನು ಆಸ್ಪತ್ರೆಗೆ ಕಳಿಸಲು ಅಕ್ಕಪಕ್ಕದ ಮನೆಗಳಿಗೆ ಹೋಗಿ ಕರೆದರೂ ಕೋವಿಡ್ ರೋಗಿ ಎಂಬ ಕಾರಣಕ್ಕೆ ಯಾರೂ ಸ್ಪಂದಿಸಲಿಲ್ಲ. ಅಷ್ಟರಲ್ಲಿ ಮಹಾವೀರನ ಪ್ರಾಣ ಹೋಗಿತ್ತು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಪಾರ್ಶ್ವನಾಥನನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.