ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………
ಹೊಸದಿಗಂತ ವರದಿ,ಮಂಡ್ಯ:
ಮೈಸೂರು ಸಕ್ಕರೆ ಕಂಪನಿ ಯಂತ್ರೋಪಕರಣಗಳು ತೀರಾ ಹಳೆಯದಾಗಿದೆ, ನಗರದ ಒಳಭಾಗದಲ್ಲಿರುವ ಕಾರಣ ಅದರಿಂದ ಬರುವ ಧೂಳು-ಹೊಗೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ನಗರದಿಂದಾಚೆಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ಹೊಸ ಕಾರ್ಖಾನೆ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಷುಗರ್ ಕುರಿತಂತೆ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಸಮಿತಿ ಮುಂದೆ ಹೊಸ ಕಾರ್ಖಾನೆ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಹಾಲಿ ಇರುವ ಕಾರ್ಖಾನೆ ನಗರದಲ್ಲೇ ಇದೆ. ಯಂತ್ರೋಪಕರಣಗಳು ತೀರಾ ಹಳೆಯದಾಗಿದ್ದು, ದುರಸ್ಥಿ ಮಾಡಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭಿಸುವುದು ಕಷ್ಟವಾಗಿದೆ. ಆದ ಕಾರಣ ಇರುವಷ್ಟು ದಿನ ಅಲ್ಲೇ ಅದನ್ನು ನಡೆಸಿ, ನಂತರದ ದಿನಗಳಲ್ಲಿ ಹೊಸ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿ ಕಾರ್ಖಾನೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಹಾಲಿ ಕಾರ್ಖಾನೆಯಿಂದ ಹೊರ ಹೊಮ್ಮುತ್ತಿರುವ ಹೊಗೆಯಿಂದಾಗಿ ಜನರು ಆಸ್ತಮಾ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದುಘಿ, ಈ ಬಗ್ಗೆ ಕೆಲವರು ಹಸಿರು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ವರ್ಗಾಯಿಸಲು ಚಿಂತನೆ ನಡೆಸಲಾಗಿದೆ ಎಂದರು.
ಮಂಡ್ಯ ಹಾಲು ಒಕ್ಕೂಟದಲ್ಲಿ ನಡೆದಿರುವ ಹಾಲಾಹಲ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ್ದು, ಅಧಿಕಾರಿಗಳು ಅದಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ. ಈಗಷ್ಟೇ ಪ್ರಕ್ರಿಯೆ ಆರಂಭವಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.