ಹೊಸದಿಗಂತ ವರದಿ,ಮೈಸೂರು:
ರಾಜ್ಯದಲ್ಲಿರುವ ಹಿಂದೂ ದೇವಾಲಯಗಳನ್ನ ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಮುಕ್ತಗೊಳಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವೆಂದು ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದರು.
ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದು ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಡಲು ಮುಂದಾಗಿರುವ ಸರ್ಕಾರದ ನಿಲುವು ಸ್ವಾಗತಾರ್ಹವಾದುದು. ಆಯಾ ಪ್ರದೇಶದ ದೇಗುಲಗಳ ಆದಾಯವನ್ನು, ಅದೇ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಆದರೆ ಈ ನಿರ್ಧಾರವನ್ನು ಕಾಂಗ್ರೆಸ್ ನಾಯಕರು, ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಆದರೆ ಅವರ ಕನಸು ನನಸಾಗುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು ನಮಗೆಲ್ಲಾ ಪಾಠವಾಗಿದೆ. ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮ ವಿಶ್ವಾಸವೂ ಈ ಸೋಲಿಗೆ ಕಾರಣವಿರಬಹುದು. ಮೊದಲ ಮತ್ತು ಎರಡನೇ ಪ್ರಾಶಸ್ತ÷್ಯದ ಮತಗಳ ಮಹತ್ವವನ್ನು ಸರಿಯಾಗಿ ಅರಿಯದೇ ಹೋದದ್ದೂ ಸಹ ಸೋಲಿಗೆ ಕಾರಣವಿರಬಹುದು. ಒಟ್ಟಾರೆಯಾಗಿ ಬಿಜೆಪಿ ಅಭ್ಯರ್ಥಿಯ ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದು ತಿಳಿಸಿದರು.
ಪಕ್ಷದಲ್ಲಿ ನನಗೆ ಹೆಚ್ಚಿನ ಅವಕಾಶ ಸಿಗೋದು ಬಿಡೋದು ಪಕ್ಷಕ್ಕೇ ಸೇರಿದ್ದು. ಮಂತ್ರಿಗೂ, ಶಾಸಕನಿಗೂ ಯಾವುದೇ ವ್ಯತ್ಯಾಸವಿಲ್ಲ. ಶಾಸಕನಾಗಿದ್ದುಕೊಂಡು ಸಹ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ಸಚಿವ ಸ್ಥಾನ ನೀಡೋದು ಬಿಡೋದು ಪಕ್ಷಕ್ಕೆ ಸೇರಿದ ವಿಚಾರ. ಕಳೆದ ಬಾರಿ ನನಗೆ ಸಚಿವ ಸ್ಥಾನ ಸಿಗದಂತೆ ಮಾಡಿದ ಆ ಒಂದು ದೂರವಾಣಿ ಕರೆಯೇ, ನನಗೆ ಮತ್ತಷ್ಟು ಹುರುಪಿನಿಂದ ಕೆಲಸ ಮಾಡಲು ಉತ್ತೇಜನ ನೀಡಿತು ಎಂದು ಹೇಳಿದರು.