Thursday, June 30, 2022

Latest Posts

ಗದಗ ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿಯಾಗಿ ಹಳಿತಪ್ಪಿದ ದಾದರ್- ಪುದುಚೇರಿ ರೈಲು; ತಪ್ಪಿದ ಭಾರೀ ಅನಾಹುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಮಾತುಂಗಾ ನಿಲ್ದಾಣದ ಬಳಿ ಗದಗ ಎಕ್ಸ್‌ಪ್ರೆಸ್‌ ರೈಲು ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ದಾದರ್- ಪುದುಚೇರಿ ಎಕ್ಸ್‌ಪ್ರೆಸ್‌ ರೈಲಿನ ಮೂರು ಬೋಗಿಗಳು ಹಳಿತಪ್ಪಿರುವ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಈ ಅವಘಡ ಸಂಭವಿಸಿರುವುದರ ಕುರಿತಾಗಿ ಕೇಂದ್ರೀಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾದರ್-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ರಾತ್ರಿ 9.30 ರ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್ 7 ಮೂಲಕ ದಾದರ್ ಟರ್ಮಿನಲ್‌ ಪ್ರವೇಶಿಸುತ್ತಿತ್ತು, ಅದೇ ಸಮಯದಲ್ಲಿ ಹೊರಟಿದ್ದ ಗದಗ್ ಎಕ್ಸ್‌ಪ್ರೆಸ್ ಚಾಲುಕ್ಯ ಎಕ್ಸ್ ಪ್ರೆಸ್‌ ಗೆ ಹಿಂಬದಿಯಿಂದ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಇದುವರೆಗೆ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ರೈಲುಗಳ ಪರಸ್ಪರ ಡಿಕ್ಕಿಯಾಗುತ್ತಿರುವುದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲುಗಳ ಘರ್ಷಣೆ ಸಂಭವಿಸಿದಾಗ ಕೆಲ ಪ್ರಯಾಣಿಕರು ಪರಸ್ಪರ ಎಚ್ಚರಿಸುವುದನ್ನು ಸಹ ವಿಡಿಯೋದಲ್ಲಿ ಕೇಳಬಹುದಾಗಿದೆ. ಭಾರತದಲ್ಲಿ ಪ್ರಯಾಣಿಕ ರೈಲು ಸೇವೆ ಆರಂಭವಾಗಿ 169 ನೇ ವಾರ್ಷಿಕೋತ್ಸವ ಆಚರಣೆಗಿಂತ ಒಂದು ದಿನ ಮೊದಲು ಈ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಪರಿಹಾರ ರೈಲುಗಳನ್ನು ಕಳುಹಿಸಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ವಕ್ತಾರ ಶಿವಾಜಿ ಸುತಾರ್ ತಿಳಿಸಿದ್ದಾರೆ. ಎರಡು ರೈಲುಗಳ ನಡುವೆ ಸಣ್ಣ ಪ್ರಮಾಣದ ಡಿಕ್ಕಿ ಸಂಭವಿಸಿದೆ, ಪುದುಚೇರಿ ಎಕ್ಸ್‌ಪ್ರೆಸ್ ರೈಲನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಆಯುಕ್ತ ಕ್ವೈಸರ್ ಖಾಲಿದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ತಿಂಗಳು ಕೇಂದ್ರ ರೈಲ್ವೆ ವಿಭಾಗದಲ್ಲಿ ರೈಲುಗಳು ಹಳಿ ತಪ್ಪುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಇತ್ತೀಚೆಗೆ ಲೋಕಮಾನ್ಯ ತಿಲಕ್ -ಜಯನಗರ ಎಕ್ಸ್‌ಪ್ರೆಸ್ (ಪವನ್ ಎಕ್ಸ್‌ಪ್ರೆಸ್) ಏಪ್ರಿಲ್ 3, 2022 ರಂದು ಮಹಾರಾಷ್ಟ್ರದ ನಾಸಿಕ್ ಬಳಿ ಹಳಿತಪ್ಪಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss