Tuesday, June 6, 2023

Latest Posts

ಕಾರು-ಬಸ್ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು

ಹೊಸದಿಗಂತ ವರದಿ,ನಾಗಮಂಗಲ:

ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಕೆಂಪನಕೊಪ್ಪಲು ಗೇಟ್‌ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
ಸೋಮವಾರ ಪೇಟೆ ಮೂಲದ ಮೈಸೂರು ವಾಸಿಗಳಾದ ಕಾರು ಚಾಲಕ ಸುದೀಪ್(35) ಇವರ ಪತ್ನಿ ಶ್ರೀಜಾ (28) ಹಾಗೂ ತಾಯಿ ಸಂಗ್ಯಮ್ಮ(55) ಮೃತ ದುರ್ದೈವಿಗಳಾಗಿದ್ದು, ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 15ವರ್ಷದ ಬಾಲಕಿಯನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸವರ್ಷದ ಮೊದಲ ಅಮವಾಸ್ಯೆ ಪ್ರಯುಕ್ತ ಒಂದೇ ಕುಟುಂಬ ನಾಲ್ವರು ತಮ್ಮ ಸ್ವಿಫ್ಟ್‌ಕಾರಿನಲ್ಲಿ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ಮೈಸೂರಿಗೆ ಹಿಂದಿರುತ್ತಿದ್ದ ವೇಳೆ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಮೈಸೂರಿನಿಂದ ನಾಗಮಂಗಲ ಕಡೆಗೆ ಬರುತ್ತಿದ್ದ ಪ್ರವಾಸಿ ಬಸ್‌ಗೆ ಮೈಸೂರು ರಸ್ತೆಯ ಕೆಂಪನಕೊಪ್ಪಲು ಗೇಟ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಸುದೀಪ್ ಸೋಮವಾರಪೇಟೆ ಸಮೀಪದ ಕುಂದಳ್ಳಿ ಗ್ರಾಮದವರು ಹಾಗೂ ಶ್ರೀಜ ಮುಳ್ಳೂಸೋಗೆ ಗ್ರಾಮದವರು.ಕಳೆದ 20 ದಿನಗಳ ಹಿಂದೆಯಷ್ಟೇ ಸೋಮವಾರಪೇಟೆ ಯಲ್ಲಿ ವಿವಾಹವಾಗಿದ್ದರು.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿತ್ತು. ಘಟನೆ ಸಂಭವಿಸುತ್ತಿದ್ದಂತೆ ದೌಡಾಯಿಸಿ ಬಂದ ಸ್ಥಳೀಯರು ನೋಡುವಷ್ಟರಲ್ಲಿ ಕಾರುಚಾಲಕ ಸುದೀಪ್ ಸೇರಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿ 15ವರ್ಷದ ಬಾಲಕಿಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಮೃತ ಸುದೀಪ್ ಹಾಗೂ ಶ್ರೀಜಾಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತೆನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸತೀಶ್ ಮತ್ತು ಸಿಬ್ಬಂದಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 15ವರ್ಷದ ಬಾಲಕಿಯನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಮತ್ತು ಘಟನೆಯಲ್ಲಿ ಗಾಯಗೊಂಡಿದ್ದ ಬಸ್‌ಚಾಲಕ ಸೇರಿ ಬಸ್‌ನಲ್ಲಿದ್ದ ನಾಲ್ವರು ಗಾಯಾಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರ ಮೃತದೇಹಗಳನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಅಪಘಾತಕ್ಕೊಳಗಾಗಿ ಜಖಂಗೊಂಡಿದ್ದ ಬಸ್ ಹಾಗೂ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಸಾಗಿಸಿದರು.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮತ್ತು ನಾಗಮಂಗಲ ಡಿವೈಎಸ್‌ಪಿ ನವೀನ್‌ಕುಮಾರ್ ಪರಿಶೀಲನೆ ನಡೆಸಿದರು. ಘಟನೆ ಹಿನ್ನಲೆಯಲ್ಲಿ ಹೆದ್ದಾರಿಯ ವಾಹನ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ಥ ಉಂಟಾಗಿತ್ತು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!