Sunday, June 26, 2022

Latest Posts

ಶೌರ್ಯಚಕ್ರ ಪುರಸ್ಕೃತ ಮೂವರು ಯೋಧರು- ನೀವು ತಿಳಿದಿರಲೇಬೇಕಾದ ಅವರ ಹೆಮ್ಮೆಯ ವಿವರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್, ನಾಯಬ್ ಸುಬೇದಾರ್ ಸೊಂಬಿರ್( ಮರಣೋತ್ತರವಾಗಿ) ಮತ್ತು ಮೇಜರ್ ಮಹೇಶ್ ಕುಮಾರ್ ಭುರೆ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ʼಶೌರ್ಯ ಚಕ್ರʼ ಪುರಸ್ಕಾರ ನೀಡಿ ಗೌರವಿಸಿದರು.

ಶೌರ್ಯ ಚಕ್ರವನ್ನು ಅಸಾಧಾರಣ ಶೌರ್ಯ ಪ್ರದರ್ಶಿಸಿದ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ನೀಡಲಾಗುತ್ತದೆ.

ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್:
2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೇಜರ್ ಧೌಂಡಿಯಾಲ್ ಹುತಾತ್ಮರಾಗಿದ್ದು, ಅವರ ಪತ್ನಿ ಲೆಫ್ಟಿನೆಂಟ್ ನಿತಿಕಾ ಕೌಲ್ ಮತ್ತು ತಾಯಿ ಸರೋಜ್ ಧೌಂಡಿಯಾಲ್ ಪ್ರಶಸ್ತಿ ಸ್ವೀಕರಿಸಿದರು.
ಮೇಜರ್ ಧೌಂಡಿಯಾಲ್ ಅವರು ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು ಹಾಗೂ ಕಾರ್ಯಾಚರಣೆಯೊಂದರಲ್ಲಿ 200 ಕೆ.ಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಈ ಹೆಮ್ಮೆಯ ಕಾರ್ಯಕ್ಕಾಗಿ ಮೇಜರ್ ಧೌಂಡಿಯಾಲ್ ಅವರಿಗೆ ಶೌರ್ಯ ಚಕ್ರ ಬಿರುದು ನೀಡಲಾಗಿದೆ. ಫೆ.2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್ ವೇಳೆ ಮೇಜರ್ ಧೌಂಡಿಯಾಲ್ ಹುತಾತ್ಮರಾದರು.

ನಾಯಬ್ ಸುಬೇದಾರ್ ಸೊಂಬಿರ್:
ಫೆ.2019ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದವರಲ್ಲಿ ನಾಯಬ್ ಸುಬೇದಾರ್ ಸೊಂಬಿರ್ ಕೂಡ ಒಬ್ಬರು.
ಈ ಎನ್‌ಕೌಂಟರ್ ವೇಳೆ ಸುಬೇದಾರ್ ಅವರು ಮೂವರು ಉಗ್ರರನ್ನು ಕೊಂದಿದ್ದಾರೆ. ಅವರಲ್ಲಿ ಒಬ್ಬ ವಿದೇಶಿ ಮತ್ತು ಇನ್ನೊಬ್ಬ ಎ++ ವರ್ಗದ ಭಯೋತ್ಪಾದಕನೂ ಇದ್ದ. ಭಯೋತ್ಪಾದಕನನ್ನು ಅತ್ಯಂತ ಸಮೀಪದಲ್ಲೇ ಗುಂಡಿಕ್ಕಿ ಕೊಂದು ಶೌರ್ಯ ಪ್ರದರ್ಶಿಸಿದ್ದ ಸುಬೇದಾರ್‌ ಅವರಿಗೆ ಶೌರ್ಯ ಚಕ್ರ ಪುರಸ್ಕಾರ ನೀಡಲಾಗಿದೆ.

ಮೇಜರ್ ಮಹೇಶ್ ಕುಮಾರ್ ಭುರೆ:
ನವೆಂಬರ್ 25 ,2018 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ಭಯೋತ್ಪಾದಕ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಯಿತು. ಈ ಕಾರ್ಯಾಚರಣೆಯಲ್ಲಿ ʼಅನುಕರಣೀಯ ನಾಯಕತ್ವ ಮತ್ತು ಅಪ್ರತಿಮ ಧೈರ್ಯʼ ಪ್ರದರ್ಶಿಸಿದ್ದು ಮೇಜರ್ ಮಹೇಶ್ ಕುಮಾರ್ ಭುರೆ. ಈ ಸಾಹಸಕ್ಕಾಗಿ ಮೇಜರ್ ಭುರೆ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮೇಜರ್ ಭುರೆ ಅವರು ಭಯೋತ್ಪಾದಕರಿರುವ ಸ್ಥಳವನ್ನು ಸುತ್ತುವರಿದಿದ್ದರು. ಭಯೋತ್ಪಾದಕರು ಈ ಬಗೆಯ ಚಾಣಕ್ಷ್ಯತನವನ್ನು ಸೈನಿಕರಿಂದ ನಿರೀಕ್ಷಿಸಿರಲಿಲ್ಲ. ನಂತರ ಭಯೋತ್ಪಾದಕರು ತಾವಿದ್ದ ಜಾಗ ಸಂಪೂರ್ಣ ಕತ್ತಲೆಯಾಗುವಂತೆ ಮಾಡಿಕೊಂಡರು. ಕಗ್ಗತ್ತಲಿನಲ್ಲಿ ಗುಂಡು, ಗ್ರೆನೇಡ್ ಹಾಗೂ ಬೆಂಕಿಯ ಉಂಡೆಗಳನ್ನು ಎಸೆಯಲು ಆರಂಭಿಸಿದರು. ಈ ಸಂದರ್ಭದಲ್ಲಿ ಮೇಜರ್ ಭುರೆ ಸೈನಿಕರನ್ನು ಹುರಿದುಂಬಿಸಿ ದಾಳಿ ಮುಂದುವರಿಸುವಂತೆ ಮಾರ್ಗದರ್ಶನ ನೀಡಿದರು. ಈ ದಾಳಿ ವೇಳೆ ಸೈನಿಕನೊಬ್ಬ ಗಾಯಗೊಂಡಿದ್ದು, ಬೆಂಕಿಯ ಮಧ್ಯೆ ಖುದ್ದು ಮೇಜರ್ ಭುರೆ ಅವರೇ ಸೈನಿಕನನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಿದರು. ನಂತರ ಉಗ್ರರನ್ನು ಸದೆಬಡಿದರು. ಮೇಜರ್ ಭುರೆ ಅವರು ಮಹಾರಾಷ್ಟ್ರದ ಒಸ್ಮಾನಾಬಾದ್‌ನವರು. ಪುಣೆಯ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರ್ ಪದವಿ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss