Saturday, April 1, 2023

Latest Posts

ಕೊಲೆ ಯತ್ನದ ಆರೋಪಿಗೆ ದಂಡ ಸಹಿತ ಮೂರು ವರ್ಷ ಸಜೆ

ಹೊಸದಿಗಂತ ವರದಿ,ಮಡಿಕೇರಿ:

ಕೊಲೆ ಯತ್ನದ ಆರೋಪಿಗೆ ಇಲ್ಲಿನ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 10ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ವೀರಾಜಪೇಟೆಯ ಹಾಲುಗುಂದ ಗ್ರಾಮದ ನಿವಾಸಿ‌ ಬಿಲ್ಲವರ ಸೋಮಪ್ಪ ಅಲಿಯಾಸ್ ಹರೀಶ್ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ: 2020ರ ಫೆ.8ರಂದು ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಮೆಡಿಕಲ್ ಶಾಪ್ ಒಂದರಲ್ಲಿ ಔಷಧಿ ಖರೀದಿಸುತ್ತಿದ್ದ ಜರೀನಾ ಎಂಬವರಿಗೆ ದಾರಿ ಬಿಡದ ವಿಷಯಕ್ಕಾಗಿ ಹರೀಶ್ ಬೈಯ್ಯುತ್ತಿದ್ದರೆನ್ನಲಾಗಿದ್ದು, ಇದನ್ನು ಕಂಡ ರಾಶಿಕ್ ಎಂಬವರು ‘ಏನು ನೀನು ಹೆಂಗಸಿಗೆ ಬೈಯ್ಯುತ್ತಿದ್ದೀಯ?’ ಎಂದು ಪ್ರಶ್ನಿಸಿದರೆಂದು ಹೇಳಲಾಗಿದೆ.
ಈ ಸಂದರ್ಭ ಆಕ್ರೋಶಗಡ ಹರೀಶ್, ‘ನೀನು ಹೆಂಗಸಿಗೆ ಸಹಾಯ ಮಾಡುತ್ತೀಯ, ನಿನ್ನನ್ನು ಈಗಲೇ
ಕೊಲ್ಲುತ್ತೇನೆ’ ಎಂದು ಹೇಳುತ್ತಾ ಚಾಕುವಿನಿಂದ ರಾಶಿಕ್‌ನ ಹೊಟ್ಟೆಯ ಭಾಗಕ್ಕೆ ಚುಚ್ಚಿ ಗಾಯವುಂಟು ಮಾಡಿರುವುದಾಗಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ‌ ಅಂದಿನ ಪೊಲೀಸ್ ಉಪ ನಿರೀಕ್ಷಕ ಎಂ.ಕೆ.ಸದಾಶಿವ ಅವರು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡಸಿದ ಮಡಿಕೇರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ. ಶೃಂಗೇಶ್ ಅವರು, ಆರೋಪಿ ಹರೀಶ್ ಕೊಲೆ ಮಾಡಲು ಪ್ರಯತ್ನಿಸಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುವುದಾಗಿ ಅಭಿಪ್ರಾಯಪಡುವುದರೊಂದಿಗೆ ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ 3 ವರ್ಷಗಳ ಶಿಕ್ಷೆ, ಹಾಗೂ ರೂ.10 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ದಂಡ ಪಾವತಿಸಲು ತಪ್ಪಿದಲ್ಲಿ 6 ತಿಂಗಳ ಸಾದಾ ಸಜೆಯನ್ನು ಅನುಭವಿಸುವಂತೆಯೂ ತೀರ್ಪಿನಲ್ಲಿ ತಿಳಿಸಿದ್ದಾರೆ.
ವಸೂಲಾಗುವ ದಂಡದ ಹಣವನ್ನು ಗಾಯಾಳುವಾಗಿದ್ದ ರಾಶಿಕ್‌ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಕೆ.ಟಿ.ಅಶ್ವಿನಿ ಅವರು ವಾದ ಮಂಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!